ಸಂವಿಧಾನದ ರಕ್ಷಣೆಗೆ ಅಗತ್ಯ ಜನಾಂದೋಲನ

CTD--NAREANALLI
Published on

ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ, ಸಂವಿಧಾನದ ಆಶಯಗಳನ್ನು ಪರಿಶಿಷ್ಟ ಜಾತಿ, ವರ್ಗ ಸೇರಿ ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವಂಥ ಜನಾಂದೋಲನ ಆರಂಭಿಸಿದಾಗ ಸಂವಿಧಾನ ರಕ್ಷಣೆ ಸಾಧ್ಯ ಎಂದು ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್ ಹೇಳಿದರು.

ನಗರದ ಭಾರತ ಸೇವಾದಳ ಸಭಾಂಗಣದಲ್ಲಿ ವೇದಿಕೆ ಮತ್ತು ವಿಮುಕ್ತಿ ವಿದ್ಯಾಸಂಸ್ಥೆ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಮೂಲಕ ದಲಿತ ಸಮುದಾಯದಲ್ಲಿ ಆತಂಕದ ವಾತಾವರಣ ಉಂಟು ಮಾಡಲಾಗುತ್ತಿದೆ. ಭಾರತದ ಸಾರ್ವಭೌಮ, ಸಮಾನತೆ, ಸಹಬಾಳ್ವೆಯಂಥ ವಿಚಾರಗಳೊಂದಿಗೆ ಸಂವಿಧಾನ ರಚಿಸಿ, ಸಮಾನತೆಯನ್ನು ಕಲ್ಪಿಸಿದ ಶ್ರೇಯಸ್ಸು ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಶಾಲಾ-ಕಾಲೇಜು ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನದ ವಿರೋಧಿ ಮನೋಭಾವ ಬರುವಂತಹ ವಿಚಾರಗಳನ್ನು ದಲಿತ ವಿದ್ಯಾರ್ಥಿಗಳಿಗೆ ತುಂಬಲಾಗುತ್ತಿದೆ ಎಂದು ವಿಷಾದಿಸಿದರು.

ಸಮಾಜದ ನೆಮ್ಮದಿಗೆ ಕಂಟಕವಾಗಿರುವ ಶಕ್ತಿಗಳನ್ನು ಮಟ್ಟ ಹಾಕಬೇಕಾದರೆ ದಲಿತರು, ಶೋಷಿತರು, ಅಲ್ಪ ಸಂಖ್ಯಾತರು, ಮಹಿಳೆಯರನ್ನು ಸಂಘಟಿಸುವ ಮೂಲಕ ಸಮ ಸಮಾಜ ಕಟ್ಟಬೇಕಾಗಿದೆ ಎಂದರು.

ನಿವೃತ್ತ ಪ್ರಾಚಾರ್ಯ, ಎದ್ದೇಳು ಕರ್ನಾಟಕದ ಜಿಲ್ಲಾ ಮುಖಂಡ ಶಿವಕುಮಾರ್ ಮಾತನಾಡಿ, 70-80 ರ ದಶಕದಲ್ಲಿ ಆರಂಭಗೊಂಡ ದಲಿತ ಸಂಘರ್ಷ ಸಮಿತಿ ದಲಿತ ಸಮುದಾಯದವರಲ್ಲಿ ಆತ್ಮಸ್ಥೈರ್ಯ ತುಂಬಿ ಚಳವಳಿಗೆ ಅಣಿಗೊಳಿಸಿತ್ತು. ಸಮುದಾಯದಲ್ಲಿ ಸ್ವಾಭಿಮಾನದ ಬೀಜ ಬಿತ್ತಿ ಆತ್ಮಗೌರವ ಕಾಪಾಡಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಹ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಆದರೆ, ಈಗ ದಲಿತರು, ಶೋಷಿತರು ವಿಚಾರದ ಕೊರತೆಯಿಂದಾಗಿ ಕಲುಷಿತ ವಾತಾವರಣದಲ್ಲಿ ಸಿಲುಕುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಮುಕ್ತಿ ವಿದ್ಯಾಸಂಸ್ಥೆಯ ಆರ್.ವಿಶ್ವಸಾಗರ್ ಮಾತನಾಡಿ, ವಿಮುಕ್ತಿ ವಿದ್ಯಾಸಂಸ್ಥೆ, ಕರ್ನಾಟಕ ಶಾಂತಿ ಸೌಹಾರ್ದ ವೇದಿಕೆ, ರೈತ ಸಂಘಟನೆ, ಸ್ಲಂ ಜನಾಂದೋಲನ ಮಹಿಳಾ ಒಕ್ಕೂಟಗಳನ್ನು ಸೇರಿಸಿಕೊಂಡು ಜನಪರ ಸಂಘಟನೆಗಳ ಒಕ್ಕೂಟ ರಚಿಸುವ ಮೂಲಕ ಸಮಾಜದ ಶಾಂತಿ ಮತ್ತು ನೆಮ್ಮದಿಗೆ ಶ್ರಮಿಸಲಾಗುತ್ತದೆ ಎಂದರು.

ರಾಜ್ಯರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಮಾತನಾಡಿ, ಜನಪರ ಚಳವಳಿ ಮತ್ತು ಸಂಘಟನೆಗಳಿಗೆ ರೈತ ಸಂಘಟನೆ ಸದಾ ಬೆನ್ನುಲುಬಾಗಿ ನಿಲ್ಲುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ತೆಗೆದುಕೊಳ್ಳತ್ತದೆ ಎಂದರು.

ಸ್ಲಂ ಜನಾಂದೋಲನ ಸಂಘಟನೆಯ ಮಂಜು, ದೌರ್ಜನ್ಯ ತಡೆ ಕಾಯಿದೆ ಸಮಿತಿಯ ಆನಂತರಾಜ್, ದಮ್ಮ ಸಾಂಸ್ಕೃತಿಕ ಕೇಂದ್ರದ ಅರಣ್ಯ ಸಾಗರ್, ವಿ.ಕೆ. ಶಂಕರಪ್ಪ, ಸುರೇಂದ್ರ, ಪುರುಷೋತ್ತಮ ತೋರಣಗಟ್ಟ, ಅನ್ನಪೂರ್ಣಮ್ಮ, ಲಕ್ಷ್ಮೀಬಾಯಿ, ಬೀಬಿಜಾನ್, ನಾಗರತ್ನ, ಎನ್.ಬಿ. ಶರೀಫ್, ಮಹಮದ್ ಹನೀಫ್, ನಿವೃತ್ತ ಯೋಧ ಕಲೀಲ್, ಪ್ರಜಾಶಕ್ತಿ ಬೋರಯ್ಯ, ಸಿರಾಜುದ್ದಿನ್, ಚನ್ನಯ್ಯನಹಟ್ಟಿ ತಿಪ್ಪೇಶಿ, ಸುರೇಶ್‌ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net