

ಮೈಸೂರು: ಸಂವಿಧಾನವಿದ್ದರೆ ಮಾತ್ರ ನಾವುಗಳು ಬದುಕುವುದಕ್ಕೆ ಸಾಧ್ಯ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ನೀಡದೇ ಹೋಗಿದ್ದರೆ ನಾವುಗಳೆಲ್ಲ ವರ್ಣಾಶ್ರಮದ ಮೇಲಿನ ಮೂರು ವರ್ಣಿಯರ ಕೆಳಗೆ ಕೂಲಿ ಮಾಡುತ್ತಾ ಜೀವನ ನಡೆಸಬೇಕಾಗಿತ್ತು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ದೇವರತ್ನ ಫೌಂಡೇಷನ್, ಚಾರ್ವಾಕ ಸಂಸ್ಥೆ ಸಹಯೋಗದಲ್ಲಿ ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿರುವ ‘ಸಂವಿಧಾನ ಉತ್ಸವ’ದಲ್ಲಿ ಸೋಮವಾರ ‘ಮನುಸ್ಮತಿ ವರ್ಸಸ್ ಭಾರತ ಸಂವಿಧಾನ’ ನಾಟಕ ಪ್ರದರ್ಶನ, ಸಂವಿಧಾನ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ಜಾರಿಯಾಗಿರುವುದಿಂದ ನಮಗೂ ಶಿಕ್ಷಣ, ರಾಜಕೀಯ ಶಕ್ತಿ ದೊರಕಿದೆ. ಸಂಪತ್ತನ್ನು ಗಳಿಸುವ ಹಕ್ಕು ಬಂದಿದೆ ಎಂದರು.
ಹಿಂದುತ್ವದ ಹೆಸರಿನಲ್ಲಿ ಆಡಳಿತ ನಡೆಸಬೇಕು ಎಂದು ಆಲೋಚನೆ ಹೊಂದಿರುವವರಿಂದ ಸಂವಿಧಾನದ ಮೌಲ್ಯವನ್ನು ಉಳಿಸುವ ಕಾರ್ಯವಾಗುವುದಿಲ್ಲ. ಬದಲಾಗಿ ಸಂವಿಧಾನ ಎಂಬ ಕಂಬದ ಒಂದೊಂದೆ ಇಟ್ಟಿಗೆಯನ್ನು ಕಳಚುವ ಮೂಲಕ ತಳಮಟ್ಟಕ್ಕೆ ತಂದುಬಿಡುತ್ತಾರೆ. ಆದ್ದರಿಂದ ಸಂವಿಧಾನದ ಉಳಿವಿಗೆ ಎಲ್ಲರೂ ಜಾಗೃತರಾಗಬೇಕು ಎಂದರು.
ರಾಜಕೀಯ ನಾಯಕರಿಗೆ ಅಧಿಕಾರವಿದ್ದಾಗ ಮಾತ್ರ ತಮ್ಮ ಆದರ್ಶವಾದ ಆಡಳಿತವನ್ನು ಅನುಷ್ಠಾನಗೊಳಿಸಬಹುದಾಗಿದೆ. ಆದರೆ ಸಾಹಿತಿಗಳು, ಚಿಂತಕರಿಗೆ ಇದ್ಯಾವ ಕಟ್ಟುಪಾಡೂ ಇರಲ್ಲ. ಅವರು ತಮ್ಮ ಸಾಕ್ಷಿಪ್ರಜ್ಞೆಯಿಂದ ಸಂವಿಧಾನದ ಮೌಲ್ಯ ಕಾಪಾಡುವ ಕಾರ್ಯ ಮಾಡಬೇಕು. ಸಾಮಾನ್ಯ ಜನರಿಗೂ ಸಂವಿಧಾನದಲ್ಲಿ ಅಡಕವಾಗಿರುವ ಮೂಲಭೂತ ಹಕ್ಕುಗಳು-ಕರ್ತವ್ಯಗಳ ಕುರಿತು ಅರಿವು ಮಾಡಿಸಬೇಕು ಎಂದರು.
ಪ್ರಪಂಚದಲ್ಲಿ ಇರುವ ಯಾವ ಧರ್ಮವು ಅಸಮಾನತೆ ಸೇರಿದಂತೆ ಇನ್ನಿತರ ಕೆಟ್ಟ ಆಚರಣೆ ಪ್ರತಿಪಾದನೆ ಮಾಡಿಲ್ಲ. ಎಲ್ಲ ಧರ್ಮಗಳು ಆಧ್ಯಾತ್ಮವನ್ನು ಬೋಧನೆ ಮಾಡುತ್ತವೆ. ಮಾನವನಾಗಲು ಯಾವ ಕ್ರಮ ಅನುಸರಿಸಬೇಕು ಎನ್ನುವ ತತ್ವ-ಸಿದ್ಧಾಂತ ತಿಳಿಸುತ್ತವೆ.
ಧರ್ಮದಲ್ಲಿ ಇರುವ ಧನಾತ್ಮಕ ಅಂಶಗಳು ಹಾಗೂ ಉತ್ತಮ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೇ ಹೊರತು ಧರ್ಮದ ಹೆಸರಿನಲ್ಲಿ ನಡೆಸುವ ಬಹುಸಂಖ್ಯಾತರ ಶೋಷಣೆ ಖಂಡಿಸಬೇಕು ಎಂದರು.
ಧರ್ಮದ ಹೆಸರಿನಲ್ಲಿ, ಧರ್ಮಾಧಾರಿತವಾಗಿ ಆಡಳಿತ ನಡೆಸುವ ಯಾವ ದೇಶವೂ ವಿಶ್ವದಲ್ಲಿ ಅಭಿವೃದ್ಧಿಯಾಗಿಲ್ಲ. ಧರ್ಮದ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಪಾಕಿಸ್ತಾನ, ಆಫಘಾನಿಸ್ತಾನ, ಮ್ಯಾನ್ಮರ್, ಕೊಲ್ಲಿಯ ಅನೇಕ ರಾಷ್ಟ್ರಗಳು ಈಗಲೂ ಪ್ರಗತಿ ಕಂಡಿಲ್ಲ. ನಮ್ಮ ದೇಶದಲ್ಲೂ ಧರ್ಮದ ಹೆಸರಿನಲ್ಲಿ ಆಡಳಿತ ನಡೆಸಬೇಕು ಎನ್ನುವ ಷಡ್ಯಂತ್ರ ನಡೆದಿದೆ. ಆದ್ದರಿಂದ ಸಂವಿಧಾನದ ಆಶಯದಂತೆ ದೇಶದಲ್ಲಿ ಆಡಳಿತ ನಡೆಸುವಂತೆ ಆಗಬೇಕಾದರೆ ಜನರು ಜಾಗೃತಗೊಳ್ಳಬೇಕು. ಸಂವಿಧಾನವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಆಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದರು.
ಚಿಂತಕ ಡಾ.ಬಂಜೆಗೆರೆ ಜಯಪ್ರಕಾಶ್, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ದೇವರತ್ನ ಫೌಂಡೇಷನ್‌ನ ಶಿವಪ್ರಸಾದ್ ಎಂ.ಸಿ.ಹುಂಡಿ, ರಂಗಕರ್ಮಿ ಎಚ್.ಜನಾರ್ದನ್(ಜನ್ನಿ), ಚಾರ್ವಾಕ ಸಂಸ್ಥೆ ಅಧ್ಯಕ್ಷ ಗಿರೀಶ್ ಮಾಚಳ್ಳಿ ಇತರರಿದ್ದರು.