

ಮೈಸೂರು: ನ್ಯಾಯಾಂಗದಲ್ಲಿನ ಸಂಪ್ರದಾಯಗಳ ಬಗ್ಗೆ ಯುವ ವಕೀಲರು ಕೂಲಂಕಷವಾಗಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಆಗ ಮಾತ್ರ ಭಾರತೀಯ ಪರಂಪರೆಗಳ ಮೌಲ್ಯಗಳು ಉಳಿಯಲು ಸಾಧ್ಯ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿಥಲ್ ಸಲಹೆ ನೀಡಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 15ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ತೇರ್ಗಡೆ ಹೊಂದಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ನಮ್ಮ ಸಂವಿಧಾನ ಮತ್ತು ಪುರಾತತ್ವಗಳ ಬಗ್ಗೆ ಹೇಳುವುದಾದರೆ, ಒಂದು ಕೈಯಲ್ಲಿ ಸಂವಿಧಾನ ಪುಸ್ತಕ ಮತ್ತೊಂದು ಕೈಯಲ್ಲಿ ಭಗವದ್ಗೀತೆ, ವೇದ, ಉಪನಿಷತ್‌ಗಳು ಇರಬೇಕು. ಈ ಮೂಲಕ ಸಂವಿಧಾನ ಮತ್ತು ಭಾರತೀಯ ಸಂಸ್ಕೃತಿಯನ್ನು ಸಮಾನವಾಗಿ ಕಾಣಬೇಕು. ಇದು ನ್ಯಾಯದಾನ ವ್ಯವಸ್ಥೆಯಲ್ಲಿ ಯುವಕರು ತಿಳಿದುಕೊಳ್ಳಬೇಕಾದ ಅಮೂಲ್ಯ ಸಂಗತಿ ಎಂದು ಹೇಳಿದರು.
ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಒಪ್ಪುವಂತಹ ಅಂಶಗಳನ್ನೊಳಗೊಂಡಿದೆ. ಮೂಲಭೂತ ಕರ್ತವ್ಯ ಮತ್ತು ಹಕ್ಕುಗಳ ಕುರಿತು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ತಮ್ಮ ಜೀವನ ಶೈಲಿ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.
ಪುರಾತನ ಕಾಲದ ಆಯುರ್ವೇದ ಚಿಕಿತ್ಸೆ ಕುರಿತು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಲು ಯತ್ನಿಸಬೇಕು. ನಮ್ಮ ಪುರಾತನ ಇತಿಹಾಸ ಮತ್ತು ಪುರಾಣದ ಮಹತ್ವಗಳನ್ನು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರತೀಯರು ನೀಡಿರುವ ಕೊಡುಗೆ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಸಲಹೆ ನೀಡಿದರು.
ತ್ರೇತಾಯುಗದಲ್ಲಿ ಶ್ರೀರಾಮ ಕರ್ತವ್ಯ ಬಗ್ಗೆ ತಿಳಿಸಿಕೊಟ್ಟಂತೆ, ಭಗವಾನ್ ಶ್ರೀಕೃಷ್ಣ ಕರ್ತವ್ಯಗಳನ್ನು ಮಹಾಭಾರತದಲ್ಲಿ ವಿಭಿನ್ನವಾಗಿ ವಿಶ್ಲೇಷಣೆ ಮಾಡಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯು ಸಂವಿಧಾನದಲ್ಲಿ ನಂಬಿಕೆಯಿಟ್ಟು, ಕಾನೂನು ಪಾಲನೆ ಮಾಡಲು ಮುಂದಾಗಬೇಕು. ಇದರಿಂದ ದೇಶವೂ ಸುರಕ್ಷಿತ, ನಮ್ಮ ಕುಟುಂಬಗಳು ಬಲಿಷ್ಠವಾಗಿರುತ್ತವೆ ಎಂದರು.
ಹಿರಿಯ ವಕೀಲರ ಕಾರ್ಯವೈಖರಿಯನ್ನು ಯುವ ವಕೀಲರು ಹತ್ತಿರದಿಂದ ಗಮನಿಸಿ, ವೃತ್ತಿ ಏಳಿಗೆಗೆ ಪ್ರಯತ್ನಿಸಬೇಕು. ಅದು ಶಿಕ್ಷಕರಾಗಲಿ, ಸಣ್ಣ-ಪುಟ್ಟ ಗುಮಾಸ್ತರಾಗಲಿ ಅನುಭವದ ಮೂಲಕ ನೀಡುವ ಸಲಹೆಗಳನ್ನು ಸ್ವೀಕರಿಸಬೇಕು. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿ ದಿನ, ಪ್ರತಿ ಕ್ಷಣದಲ್ಲೂ ಕಲಿತುಕೊಳ್ಳುವುದು ಸಾಕಷ್ಟಿದೆ. ಇದಕ್ಕೆ ಎಲ್ಲರ ಸಹಕಾರ, ಸಹಮತ ಅಗತ್ಯವಿದೆ. ತಮ್ಮ ಜೀವಿತಾವಧಿಯವರೆಗೂ ವಕೀಲ ವೃತ್ತಿಯ ಮೌಲ್ಯಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಕೆ.ಸೋಮಶೇಖರ್ ಮಾತನಾಡಿದರು. ಕಾಲೇಜು ಸಮಿತಿಯ ಪ್ರೊ.ಕೆ.ನಟರಾಜು, ಪ್ರೊ.ಕೆ.ಎಸ್.ಸುರೇಶ್, ಪ್ರೊ.ಶಿವಾನಂದ ಭಾರತಿ ಇದ್ದರು. ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅವರು ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು.
ಕಾನೂನು ಪದವಿ ರ‌್ಯಾಂಕ್ ಪಡೆದವರು
ಬಿ.ಎ. ಎಲ್‌ಎಲ್‌ಬಿಯಿಂದ ಟಿ.ಎಸ್.ಬಿಂದು(ಪ್ರ), ಸಿ.ಧೃತಿ(ದ್ವಿ), ಕೆ.ಸ್ಮತಿ(ತೃ), ಸಿ.ತಪೋಶ್ರೇಷ್ಠ(ನಾಲ್ಕನೇ ರ‌್ಯಾಂಕ್), ಎಂ.ಹಿಮ( ಐದನೇ)ಗಳಿಸಿದ್ದಾರೆ. ಬಿಬಿಎ ಎಲ್‌ಎಲ್‌ಬಿಯಲ್ಲಿ ಆರ್ಯ ಎಬೆಲ್ ಪಿಲಿಫ್ಸ್, ಸ್ವಾತಿ ಎಸ್.ಗಣೇಶ್, ಲಿಯ ಅನ್ನ್ ಫ್ರಾಸಿಸ್, ವಿಸ್ಮಯ ಸಿಂಹ, ಅಕ್ಷಯ ಶಾಜು, ಸಿ.ಶ್ರೇಯಸ್ ನಾರಾಯಣ ರ‌್ಯಾಂಕ್ ಗಳಿಸಿದ್ದಾರೆ.
ಎಲ್‌ಬಿಬಿಯಲ್ಲಿ ಹುಝೈಫಾ ಮುಸ್ತಾಕ್, ಎಸ್.ಕ್ಯಾರೋಲಿನ್, ಶಾಮನಜ್ ಅಬೂಬುಕರ್, ನೇಹ ಕೌಸರ್, ಆರ್.ಪಿ.ಕಾವ್ಯಾ, ಎ.ಅನನ್ಯ ಸೇರಿದಂತೆ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಬಿಎ ಎಲ್‌ಎಲ್‌ಬಿ ಯಿಂದ 38 ವಿದ್ಯಾರ್ಥಿಗಳು, ಬಿಬಿಎ ಎಲ್‌ಎಲ್‌ಬಿ ಯಿಂದ 47 ವಿದ್ಯಾರ್ಥಿಗಳು, ಎಲ್‌ಎಲ್‌ಬಿಯಿಂದ 35 ವಿದ್ಯಾರ್ಥಿಗಳು ಪದವಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ 17 ರ‌್ಯಾಂಕ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.