

ಚಿತ್ರದುರ್ಗ: ಸಂವಿಧಾನ ಅಪಾಯದಲ್ಲಿದೆ. ಹೀಗಾಗಿ ದಾವಣಗೆರೆಯ ಬೀರಲಿಂಗೇಶ್ವರ ದೇಗುಲ ಆವರಣದಲ್ಲಿ ಏ. 26ರಂದು ಸಂವಿಧಾನ ಸಂರಕ್ಷಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಕೆ.ಎಲ್. ಅಶೋಕ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ 10 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಸಾಹಿತಿ ಬರಗೂರು ರಾಮಚಂದ್ರಪ್ಪ, ನಟ ಪ್ರಕಾಶ್ ರಾಜ್, ಹೋರಾಟಗಾರ್ತಿ ಮೇಧ ಪಾಟ್ಕರ್, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಂವಿಧಾನ ರಕ್ಷಿಸಲು ಬಯಸುವ ಪ್ರತಿಯೊಬ್ಬರು ಸಮಾವೇಶದಲ್ಲಿ ಪಾಲ್ಗೊಳ್ಳಿ. ಅದರಿಂದ ಮಾತ್ರ ಪ್ರಜೆಗಳ ಹಿತ ಕಾಪಾಡಲು ಸಾಧ್ಯ ಎಂದು ಹೇಳಿದರು.
ವಕೀಲ ಬಿ.ಕೆ.ರಹಮತ್‌ವುಲ್ಲಾ ಮಾತನಾಡಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂಬುದಾಗಿ ಬಿಜೆಪಿಯ ಕೆಲ ನಾಯಕರು ಆಗಿಂದಾಗ್ಗೆ ಹೇಳಿಕೆ ನೀಡುತ್ತಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದಲ್ಲೊಂದು ದಿನ ಸಂವಿಧಾನಕ್ಕೆ ಅಪಾಯ ಗ್ಯಾರಂಟಿ. ಆದ್ದರಿಂದ ಜನರನ್ನು ಎಚ್ಚರಿಸುವುದಕ್ಕಾಗಿ ದಾವಣಗೆರೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಂವಿಧಾನ ತಿದ್ದುಪಡಿಗೆ ಅವಕಾಶವಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾದರೆ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಶೋಷಿತ ಸಮುದಾಯದವರು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಬದಲಿಸಲು ಬಿಡಬಾರದು ಎಂದು ಸಲಹೆ ನೀಡಿದರು.
ವಕೀಲ ಚಂದ್ರಪ್ಪ ಮಾತನಾಡಿ, ಸಂವಿಧಾನದ ಅಡಿಪಾಯವನ್ನೇ ಅಲುಗಾಡಿಸುವುದು ಸರಿಯಲ್ಲ. ತಿದ್ದುಪಡಿ, ಬದಲಾವಣೆ ಎರಡಕ್ಕೂ ವ್ಯತ್ಯಾಸವಿದೆ. ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶ ನಮ್ಮದಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಶಿವಕುಮಾರ್, ಜನಶಕ್ತಿ ಟಿ.ಶಫಿವುಲ್ಲಾ, ಸಲೋಮನ್ ರಾಜ್‌ಕುಮಾರ್, ಮುಖಂಡರಾದ ಧನಂಜಯ, ಸಿರಾಜ್, ಹನುಮಂತಪ್ಪ ಗೋನೂರು ಇತರರಿದ್ದರು.