ಸಂವಿಧಾನ ವಿರೋಧಿಗಳು ಬಲಾಢ್ಯರಾಗಲು ಬಿಡಬೇಡಿ

Ambedkar
Published on

ಚಿತ್ರದುರ್ಗ: ರಾಷ್ಟ್ರದೊಳಗೆ ಸಂವಿಧಾನ ವಿರೋಧಿಗಳು ಬಲಾಢ್ಯರಾಗಲು ಬಿಡಬಾರದು. ಡಾ.ಬಿ.ಆರ್.ಅಂಬೇಡ್ಕರ್ ವಾದ ಗಟ್ಟಿಯಾದಾಗ ಮಾತ್ರ ದೇಶ, ಸಂವಿಧಾನ ಉಳಿಯಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದರು.

ತರಾಸು ರಂಗಮಂದಿರದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‌ನಿಂದ ಸೋಮವಾರ ಹಮ್ಮಿಕೊಂಡಿದ್ದ ‘ಅಂಬೇಡ್ಕರ್ ಉತ್ಸವ’ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಪೀಠಿಕೆ ಇನ್ನು ಮುಂದೆ ಕಡ್ಡಾಯ. ಅಂತಹ ಮಹತ್ತರ ನಿರ್ಧಾರ ರಾಜ್ಯ ಸರ್ಕಾರ ಕೈಗೊಂಡಿದೆ. ವಿಶ್ವದ ಪ್ರಜಾಪ್ರಭುತ್ವ ದಿನದಂದು ಇದಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ. ಅಂಬೇಡ್ಕರ್ ಆಂದೋಲನ ರಾಷ್ಟ್ರೀಯ ಚಳವಳಿಯಾಗಿ ರೂಪುಗೊಳ್ಳಬೇಕು. ಯಾರನ್ನೂ ದ್ವೇಷಿಸದೆ, ಸರ್ವರನ್ನು ಗೌರವಿಸುವ, ಪ್ರೀತಿಸುವ ವಾತಾವರಣ ಸೃಷ್ಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಬಲಿಷ್ಠ ನಾಯಕತ್ವ ಕಟ್ಟೋಣ ಎಂದರು.

ಹಿಂದಿನ ಕಾಲದಿಂದಲೂ ನಾವೆಲ್ಲರೂ ಸಂಸ್ಕೃತ ಕಲಿಕೆಯಿಂದ ವಂಚಿತರಾಗಿದ್ದೇವೆ. ಶೂದ್ರರನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸಮಾನತೆ, ಆರ್ಥಿಕ ಸಬಲತೆಗಾಗಿ ಹೋರಾಟಗಳು ಈಗಲೂ ಮುಂದುವರೆದಿವೆ. ಧರ್ಮದ ಹೆಸರಿನಲ್ಲಿ ಸ್ಪಶ್ಯರು ಅಸ್ಪಶ್ಯರನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಟ್ಟು, ಶೋಷಣೆ ಮಾಡಿದ್ದಾರೆ. ಹೀಗಾಗಿ ಬುದ್ಧ, ಅಂಬೇಡ್ಕರ್ ಚಿಂತನೆಗಳಿಲ್ಲದೇ ಭಾರತ ಸಮೃದ್ಧ ದೇಶವಾಗಲು ಸಾಧ್ಯವಿಲ್ಲ. ಮಹನೀಯರ ಹೆಸರಿನಲ್ಲಿ ಉತ್ಸವ ನಡೆಸುವ ಮೂಲಕ ಬೆಳಕು ಚೆಲ್ಲಲ್ಲು ಪರಿಷತ್ ಮುಂದಾಗಿದೆ ಎಂದರು.

ಲಾರ್ಡ್ ಮೆಕಾಲೆ ಶಿಕ್ಷಣ ಉದಾರೀಕರಣ ಮಾಡಿದ ಪರಿಣಾಮ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಲಾರಂಭಿಸಿತು. ಹೀಗಾಗಿ ಇಂದು ಎಲ್ಲರಿಗೂ ಶಿಕ್ಷಣ ಸಿಗುತ್ತಿದೆ. ಇಲ್ಲದಿದ್ದರೆ, ಈಗಲೂ ಜೀತದಾಳುಗಳಾಗಿ ದುಡಿಯುವ ದುಸ್ಥಿತಿ ಮುಂದುವರೆಯುತ್ತಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಪರ್ಶಿಯನ್ ಭಾಷೆ ಕಲಿಯಲು ಸಾಧ್ಯವಾಗಿದ್ದು, ಮೆಕಾಲೆ ನೀತಿಯಿಂದಾಗಿ ಎಂದು ಹೇಳಿದರು.

ಶಿಕ್ಷಣ ಮಾತೃಭಾಷೆಯಲ್ಲೇ ಪಡೆದರೂ ಸಂಪರ್ಕ ಮತ್ತು ಬೆಳವಣಿಗೆ ದೃಷ್ಟಿಯಿಂದ ಹಿಂದಿ, ಇಂಗ್ಲಿಷ್ ಕಲಿಯಲೇಬೇಕು. ಇಲ್ಲದಿದ್ದರೆ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇಲ್ಲದಂತಾಗುತ್ತದೆ. ಶಿಕ್ಷಣವಿಲ್ಲದೆ, ದಲಿತರ ಜೀವನಮಟ್ಟ ಸುಧಾರಿಸದು. ಆದ್ದರಿಂದ ಸಮುದಾಯಕ್ಕೆ ಆಸ್ತಿ, ಅಸ್ತ್ರ ಎರಡೂ ಶಿಕ್ಷಣವಾಗಿದೆ. ಇದರಿಂದ ಹೋರಾಟ, ನೈತಿಕತೆ, ವ್ಯಕ್ತಿತ್ವ ವಿಕಸನವಾಗಲಿದೆ. ನಾಯಕತ್ವ ಮನೋಭಾವ ಬೆಳೆದು ಇತಿಹಾಸ ಸೃಷ್ಟಿಗೂ ಕಾರಣವಾಗಲಿದೆ ಎಂದರು.

ಶಿಕ್ಷಣ ಕಿತ್ತುಕೊಂಡ ಸನಾತನ ಧರ್ಮ: ಕರ್ನಾಟಕ ದಸಂಸ ಚಾಲನಾ ಸಮಿತಿ ಸದಸ್ಯ ಮಾವಳ್ಳಿ ಶಂಕರ್ ಮಾತನಾಡಿ, ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಹೆಸರಿನಲ್ಲಿ ಪ್ರಧಾನಿ ಮರಳು ಮಾಡುತ್ತಿದ್ದಾರೆ. ಎಸ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದವರೆಗೂ ಸ್ಕಾಲರ್‌ಶಿಪ್ ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಪ್ರಸ್ತುತ ಜಾರಿಗೆ ತರಲು ಹೊರಟಿರುವ ಎನ್‌ಇಪಿ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡುವ ಕುತಂತ್ರವಾಗಿದೆ. ಸನಾತನ ಧರ್ಮವೇ ನಮ್ಮ ಶಿಕ್ಷಣ ಮತ್ತು ಹಕ್ಕುಗಳನ್ನು ಕಿತ್ತುಕೊಂಡಿದೆ ಎಂದು ಆರೋಪಿಸಿದರು.

ಚಾಮರಾಜನಗರ ನಳಂದ ಬೌದ್ಧ ವಿಹಾರದ ಬೋಧಿಧತ್ತ ತೇರಾ ಬಂತೇಜಿ ಸಾನಿಧ್ಯ ವಹಿಸಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಗಣಕಯಂತ್ರ ಶಿಕ್ಷಣ ಒದಗಿಸಬೇಕು. ಗ್ರಾಮೀಣ ಶಾಲೆಗಳಿಗೂ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮವಹಿಸಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾರಣಕ್ಕೆ ನನ್ನ ಕ್ಷೇತ್ರದ ವಸತಿ ನಿಲಯಗಳಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿದೆ. ಸಚಿವರು ಬಗೆಹರಿಸುವ ಮೂಲಕ ಇದಕ್ಕೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಸಿದ್ಧಯ್ಯನ ಕೋಟೆಯ ಶ್ರೀ ಬಸವಲಿಂಗ ಸ್ವಾಮೀಜಿ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಯಕೊಂಡ ಶಾಸಕ ಬಸವಂತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಜಿ.ಎಸ್.ಮಂಜುನಾಥ್, ಆರ್.ಕೆ.ಸರ್ದಾರ್, ಎಚ್.ಸಿ.ನಿರಂಜನಮೂರ್ತಿ, ಟಿ.ಡಿ.ರಾಜಗಿರಿ, ನಗರಸಭೆ ಸದಸ್ಯ ವೀರಭದ್ರಪ್ಪ, ಪ್ರೊ.ಲಿಂಗಪ್ಪ, ಮಲ್ಲಾಡಿಹಳ್ಳಿ ಸಿದ್ಧಲಿಂಗಮ್ಮ, ಜನಪದ ಕಲಾವಿದ ಪ್ಯಾರೇಜಾನ್, ಅಧಿಕಾರಿಗಳಾದ ಜಗದೀಶ್ ಹೆಬ್ಬಳ್ಳಿ, ಮಂಜುನಾಥ್, ನಿವೃತ್ತ ಡಿಡಿಪಿಐ ರೇವಣಸಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net