ಸಂವಿಧಾನ ರಕ್ಷಣೆಗೆ ವಕೀಲರ ಕೈಯಲ್ಲಿ: ನ್ಯಾ. ಇಂದಿರೇಶ್

mysore
Published on

ಮೈಸೂರು: ಕಾನೂನಿನ ಶ್ರೇಷ್ಠ ಗ್ರಂಥವಾದ ಸಂವಿಧಾನ ರಕ್ಷಣೆ ವಕೀಲರ ಕೈಯಲ್ಲಿದೆ. ಈ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಣೆ ಮಾಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದರು.

ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಸೋಮವಾರ ನವೀಕೃತ ಕಲ್ಪಿತ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಅಸ್ತಿತ್ವ, ಅಸ್ಮಿತೆ ಉಳಿದಿರುವುದೇ ಸಂವಿಧಾನದಲ್ಲಿ. ಬಹಳಷ್ಟ ದೇಶದ ಸಂವಿಧಾನಗಳು ಬದಲಾಗಿವೆ. ಆದರೆ, ಭಾರತದ ಸಂವಿಧಾನ ಬದಲಾಗಿಲ್ಲ. ಅದರ ಮೂಲ ಆಶಯದ ಸ್ವರೂಪಕ್ಕೆ ಕೈ ಹಾಕಲೂ ಸಾಧ್ಯವಿಲ್ಲ. ಇದಕ್ಕೆ ಕಾರಣ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನ. 75 ವರ್ಷವಾದರೂ ಅದು ಅಷ್ಟು ಸುಭದ್ರವಾಗಿರುವುದೇ ಈ ಕಾರಣಕ್ಕೆ ಎಂದರು.

ಈಗಿನ ವಕೀಲರು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಕೋರ್ಟ್ ವಾದ ಮಂಡನೆಗೆ ಇಳಿಯುತ್ತಿಲ್ಲ. ಬರೀ ಪೀಠಿಕೆಯಷ್ಟೇ ಓದಿಕೊಂಡು ಬಂದು ವಾದ ಮಾಡಿ ಸೋಲುತ್ತಾರೆ, ಇದು ಆಗಬಾರದು. ತೀರ್ಪನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಸಮಗ್ರ ಜ್ಞಾನಾರ್ಜನೆ ಗಳಿಸಿಕೊಳ್ಳಬೇಕು ಎಂದರು.

ವಕೀಲರು ಸದಾ ಕಲಿಕಾ ವಿದ್ಯಾರ್ಥಿಯಾಗಿರಬೇಕು. ಕಾಯ್ದೆ-ಕಾನೂನುಗಳ ಆಶಯ, ತಿರುಳು ಅರ್ಥೈಸಿಕೊಳ್ಳಬೇಕು. ವೈಯಕ್ತಿಕವಾಗಿ ಅಧ್ಯಯನ ಮಾಡಿದಾಗಲೇ ಉತ್ತಮ ವಕೀಲರಾಗಲು, ಉತ್ತಮ ನ್ಯಾಯಾಧೀಶರಾಗಲು ಸಾಧ್ಯ. ಕಾನೂನು ಜ್ಞಾನ ವಕೀಲರ ಬುನಾದಿ ಶಿಕ್ಷಣ ಎಂದರು.

ಕಾನೂನು ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳು ತೆರೆದುಕೊಂಡಿವೆ. ಹೀಗಾಗಿ, ಕಾನೂನು ಶಿಕ್ಷಣಕ್ಕೆ ಬೇಡಿಕೆ ಬಂದಿದೆ. ವೈದ್ಯಕೀಯ, ಇಂಜಿನಿಯರಿಂಗ್‌ಗಿಂತ ಕಾನೂನು ಕಲಿಕೆಗೆ ವಿದ್ಯಾರ್ಥಿಗಳು ಮುಂದಾಗುತ್ತಿದ್ದಾರೆ. ಈ ವೃತ್ತಿಯಲ್ಲಿರುವ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕು. ಸಂಸತ್‌ನಲ್ಲಿ ಕಾನೂನಿನ ಕರಡು, ವಿಧೇಯಕಗಳ ರಚನೆ ಕೆಲಸಕ್ಕೆ ಕಾನೂನು ವಿದ್ಯಾರ್ಥಿಗಳ ಅಗತ್ಯತೆ ಇದೆ. ಯುಪಿಎಸ್‌ಸಿ ಮೂಲಕ ನಡೆಯುವ ಪರೀಕ್ಷೆಗೆ ತೇರ್ಗಡೆಯಾಗಿ ಈ ಅವಕಾಶ ಬಳಸಿಕೊಳ್ಳಬೇಕು. ಭಾರತೀಯ ಸೇವೆಗಿಂತ ವಕೀಲ ವೃತ್ತಿ ಉತ್ತಮ ಎಂದರು.

ಇದೀಗ ಎಲ್ಲೆಡೆ ಉತ್ತಮ ವಕೀಲರು ಬೇಕಾಗಿದ್ದಾರೆ. ಕಾರ್ಪೋರೇಟ್ ಕಂಪನಿಗಳು, ಕೆಪಿಎಸ್‌ಸಿ, ಕೆಎಫ್‌ಸಿ ಸೇರಿದಂತೆ ಇನ್ನಿತರ ಸರ್ಕಾರಿ ಸಂಸ್ಥೆಗಳು ಉತ್ತಮ ವಕೀಲರನ್ನು ಹುಡುಕುತ್ತಿದ್ದಾರೆ. ಆದರೆ, ಸಿಗುತ್ತಿಲ್ಲ. ವೈದ್ಯಕೀಯ, ಇಂಜಿನಿಯರ್ ಸೇರಿದಂತೆ ವಿವಿಧ ವೃತ್ತಿಯಲ್ಲಿ ಬಯಸುವಂತೆ ಉತ್ತಮ ವೃತ್ತಿಪರರು ವಕೀಲ ವೃತ್ತಿಗೂ ಬೇಕಾಗಿದ್ದಾರೆ. ಅಂತಹವರಿಗೆ ಬೇಡಿಕೆ ಸದಾ ಇರುತ್ತದೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಎಷ್ಟು ಓದಿದ್ದೀರಿ, ಎಲ್ಲಿ ಓದಿದ್ದೀರಿ ಎಂಬುದು ಮುಖ್ಯವಲ್ಲ. ವ್ಯಕ್ತಿತ್ವ ಹೇಗೆ ಪ್ರತಿನಿಧಿಸುತ್ತೀರಿ ಎಂಬುದು ಮುಖ್ಯ. ಸ್ಪರ್ಧಾತ್ಮಕ ಯುಗದಲ್ಲಿ ಕ್ಲಾಸ್‌ರೂಮ್‌ಗಿಂತ ಹೊರಗೆ ಹೆಚ್ಚು ಕಲಿಯುತ್ತಾರೆ. ಹಿಂದಿನಂತೆ ಇನ್ನೊಬ್ಬರನ್ನು ನೋಡಿ ತಿಳಿದುಕೊಳ್ಳುವುದಕ್ಕಿಂತ ಸ್ವಯಂ ಕಲಿಕೆಗೆ ಒತ್ತು ನೀಡುವ ಕಾಲ ಇದು ಎಂದರು.

ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜು, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್, ಪ್ರಾಂಶುಪಾಲೆ ಡಾ.ಎನ್.ವಾಣಿಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net