

ಕಲಬುರಗಿ: ಸಂವಿಧಾನದ ಮೌಲ್ಯ ಅರಿಯುವುದು ಇಂದಿನ ತುರ್ತು ಅಗತ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯೂ ಆದ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ್ ಪ್ರತಿಪಾದಿಸಿದರು.
ಗುಲ್ಬರ್ಗ ವಿವಿಯಲ್ಲಿ ಡಾ.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಡಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಪ್ರಮುಖ ಭಾಷಣ ಮಾಡಿದ ಅವರು, ಸಂವಿಧಾನದ ಹೆಸರು ಹೇಳಿಕೊಂಡು ಓಡಾಡಿದರೆ ಸಾಲದು, ಸಮಗ್ರ ಅಧ್ಯಯನ ಮಾಡಬೇಕು. ಅದರಲ್ಲಿನ ಪ್ರಮುಖ ಅಂಶಗಳ ಕುರಿತು ಜನಸಾಮಾನ್ಯರಲ್ಲಿ ತಿಳಿಹೇಳುವ ಕೆಲಸ ಆಗಬೇಕು. ವೇಗವಾಗಿ ಓಡುತ್ತಿರುವ ವಿಶ್ವದೊಂದಿಗೆ ಹೆಜ್ಜೆ ಹಾಕಲು ಎಲ್ಲರೂ ಎಲ್ಲ ಹಂತದಲ್ಲೂ ಅಪ್‌ಡೇಟ್ ಆಗಲೇಬೇಕಿದೆ ಎಂದರು.
ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಗುರುಕುಲದಿಂದ ಕೃತಕ ಬುದ್ಧಿಮತ್ತೆವರೆಗೆ ಬಂದು ನಿಂತಿದ್ದೇವೆ. ಈ ಹಿಂದೆ ಇದ್ದ ನಳಂದಾ, ತಕ್ಷಶಿಲಾ ವಿವಿಗಳಲ್ಲಿ ಅಂತರ್‌ಶಿಸ್ತೀಯ ಶಿಕ್ಷಣ ನೀಡಲಾಗುತ್ತಿತ್ತು. ಈಗ ಡಿಜಿಟಲ್ ಯುಗ. ಹೀಗಾಗಿ ಈ ಮಾಧ್ಯಮದ ಮೂಲಕ ಮುನ್ನುಗ್ಗುವ ಅನಿವಾರ್ಯತೆ ಇದೆ ಎಂದು ಹೇಳಿದರು.
ಕೌಶಲ ಆಧಾರಿತ ಶಿಕ್ಷಣದಿಂದ ಮಾತ್ರ ಯಶಸ್ಸು ಸಾಧ್ಯ. ಎಷ್ಟೋ ಜನ ಪ್ರತಿಭಾವಂತರಿದ್ದರೂ ಕೌಶಲ ಕೊರತೆಯಿಂದ ಹಿನ್ನಡೆ ಅನುಭವಿಸಬೇಕಾಗಿದೆ. ಭವಿಷ್ಯದ ಪೀಳಿಗೆ ಬೆಳೆಯಬೇಕು ಎಂದಾದರೆ ಕೌಶಲಕ್ಕೆ ಆದ್ಯತೆ ನೀಡಲೇಬೇಕು. ಸುಮಾರು ೧೮ ಲಕ್ಷ ಪ್ರತಿಭಾವಂತರು ಹೊರದೇಶಕ್ಕೆ ಹೋಗಿದ್ದಾರೆ. ಭಾರತದಲ್ಲಿ ೧೧೦೦ ವಿವಿ, ೪೫ ಸಾವಿರ ಮಹಾವಿದ್ಯಾಲಯಗಳಿದ್ದು, ಪ್ರತಿಭೆಗಳನ್ನು ಉಳಿಸಿ ಬೆಳೆಸಲು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂದರು.
೧೯೪೭ರಲ್ಲಿ ಸ್ವಾತಂತ್ರ್ಯ ದೊರೆತಾಗ ಆಹಾರ ಭದ್ರತೆ, ಬಡತನ, ಸಂಪರ್ಕ ಸಮಸ್ಯೆ ಕಾಡುತ್ತಿತ್ತು. ಇದನ್ನು ಮನಗಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದರು. ಪ್ರಮುಖ ಮೂರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ೧೯೬೦ರಲ್ಲಿ ಡಾ.ಎಂ.ಎಸ್. ಸ್ವಾಮಿನಾಥನ್ ಹಸಿರು ಕ್ರಾಂತಿ ತಂದರು. ೨೦೩೦ರಲ್ಲಿ ಭಾರತಕ್ಕೆ ೪೦೦ ಮಿಲಿಯನ್ ಟನ್ ಆಹಾರ ಬೇಕಾಗಲಿದೆ. ಆದರೆ ಪ್ರಸಕ್ತ ೩೫೦ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಆಹಾರ ಸಮಸ್ಯೆಯಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರೊ.ನಿರಂಜನ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಡಾ.ಅಂಬೇಡ್ಕರ್ ಎಲ ಧರ್ಮ, ಜಾತಿಗೆ ಸರಿಹೊಂದುವ ಸಂವಿಧಾನ ನೀಡಿದ್ದಾರೆ. ವಿಶ್ವದ ಎದುರು ದೇಶ ತಲೆ ಎತ್ತಿ ನಿಂತಿದೆ ಎಂದಾದರೆ ಸಂವಿಧಾನದಿAದ ಮಾತ್ರ. ಸಂವಿಧಾನದ ೩೭೧(ಜೆ) ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅಪಾರ ಅವಕಾಶಗಳು ದೊರೆತಿವೆ. ಇದು ಸಂವಿಧಾನದ ತಾಕತ್ತು ಎಂದು ಹೇಳಿದರು.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಾಯಿಸುವ ಮಾತನಾಡುತ್ತಿವೆ. ಆದರೆ ಸಂವಿಧಾನಕ್ಕೆ ಕೈ ಹಚ್ಚಿದರೆ ದೇಶದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಲಿದೆ. ಯಾವ ಕಾರಣಕ್ಕೂ ಸಂವಿಧಾನ ಬದಲಾವಣೆ ಅಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಗೂರು ಶ್ರೀರಾಮಲು, ಹಾವೇರಿ ಜಾನಪದ ವಿವಿ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಮಾತನಾಡಿದರು. ಕುಲಸಚಿವ ಪ್ರೊ.ರಮೇಶ ಲಂಡನಕರ್, ಕುಲಸಚಿವ ಮೌಲ್ಯಮಾಪನ ಡಾ.ನಿಂಗಣ್ಣ ಕಣ್ಣೂರ, ಸಿಂಡಿಕೇಟ್ ಸದಸ್ಯ ಉದಯ ಪಾಟೀಲ್, ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ.ಕೆ. ಸಿದ್ದಪ್ಪ, ಮಲ್ಲಣ್ಣ ಮಡಿವಾಳ, ಎಸ್.ಪಿ. ಸುಳ್ಳದ ಇತರರಿದ್ದರು.
ಡಾ.ಅಂಬೇಡ್ಕರ್ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಚಂದ್ರಕಾಂತ ಯಾತನೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಶಿವರಾಜ ಕೊಪ್ಪರ್ ವಿಚಾರ ಸಂಕಿರಣದ ವರದಿ ವಾಚಿಸಿದರು. ಕಾಶೀನಾಥ ವಂದಿಸಿದರು.
ಸ್ವಯಂ ಮೌಲ್ಯಮಾಪನ ಅಗತ್ಯ: ಆರ್ಥಿಕ ಬೆಳವಣಿಗೆ ಕಂಡರೆ ಮಾತ್ರ ಮೂಲಸೌಲಭ್ಯ ದೊರೆತು ದೇಶ ಕಟ್ಟಲು ಸಾಧ್ಯ. ಸಮಾಜದ ಎಲ್ಲ ರಂಗದಲ್ಲಿ ಸಮಪಾಲು ಪ್ರಗತಿ ಆದಾಗಲೇ ಆರೋಗ್ಯವಂತ ರಾಷ್ಟ್ರ ನಮ್ಮದಾಗಲಿದೆ. ಶಿಕ್ಷಣದಲ್ಲಿ ಪರಿಸರ ಪಾಠ ಹೆಚ್ಚಿಸುವ ಬಗ್ಗೆ ಅರಿವು ಮೂಡಿಸುವ ಕೆಲಸ ನಿರಂತರ ನಡೆಯಬೇಕಿದೆ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಅರಿತು ಬದ್ಧತೆಯೊಂದಿಗೆ ಸ್ವಯಂ ಮೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳಬೇಕು. ನಾವು ಮಾಡಿದ ಕೆಲಸ ಮೊದಲು ನಮಗೆ ತೃಪ್ತಿ ತರಬೇಕು. ಆಗಲೇ ಸುಧಾರಣೆ ತರಲು ಸಾಧ್ಯ ಎಂದು ಪ್ರೊ.ನಿರಂಜನ್ ಮಾರ್ಮಿಕವಾಗಿ ಹೇಳಿದರು.
ದೇಶ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನದಲ್ಲೂ ಅಪಾರ ಬೆಳವಣಿಗೆ ಕಂಡಿದೆ. ಆಗ ಕೇವಲ ೪ ಐಐಟಿ ಹೊಂದಿದ್ದ ಭಾರತದಲ್ಲಿ ಇಂದು ೨೩ ಐಐಟಿಗಳಿವೆ. ವ್ಯಾಕ್ಸಿನ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಕೋವಿಡ್ ವೇಳೆ ಅನೇಕ ದೇಶಗಳಿಗೆ ವ್ಯಾಕ್ಸಿನ್ ಒದಗಿಸಿದ ಕೀರ್ತಿ ಭಾರತಕ್ಕಿದೆ.
| ಪ್ರೊ.ಎಸ್.ಆರ್.ನಿರಂಜನ್
ಉಪಾಧ್ಯಕ್ಷ, ಉನ್ನತ ಶಿಕ್ಷಣ ಪರಿಷತ್