ಸಂವಿಧಾನ ಬದಲಾವಣೆ ಅಸಾಧ್ಯ

pratibha Purskar
Published on

ಬೀದರ್: ಡಾ.ಬಿ.ಆರ್. ಅಂಬೇಡ್ಕರ್ ರಚಿತ ಭಾರತದ ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ಸಾಹಿತ್ಯರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಮಂಚ್ ಟ್ರಸ್ಟ್ ಹಾಗೂ ಜಿಲ್ಲಾ ಮಾದಿಗ ನೌಕರರ ಸಂಘದ ಸಹಯೋಗದಡಿ ಅಣ್ಣಾಭಾವು ಸಾಠೆ 103ನೇ ಜಯಂತ್ಯುತ್ಸವ ನಿಮಿತ್ತ ನಗರದಲ್ಲಿ ಏರ್ಪಡಿಸಿದ್ದ ಸಂವಿಧಾನ ಜಾಗೃತಿ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸುವುದರ ಜತೆಗೆ ಅಸಂಖ್ಯ ದುರ್ಬಲ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಮುಖ್ಯ ವಾಹಿನಿಯತ್ತ ಕರೆತರಲು ಶ್ರಮಿಸಬೇಕಿದೆ ಎಂದರು.
ಪ್ರಾಮಾಣಿಕ ಮತ್ತು ನೈತಿಕತೆಯಿಂದ ನಡೆದುಕೊಂಡರೆ ಸಮಾನತೆ ಮತ್ತು ಜಾತ್ಯತೀತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಶಾಲಾ ಮಕ್ಕಳಿಗೆ ಇದನ್ನು ಕಲಿಸಬೇಕಾಗಿದೆ. ಮಹಾತ್ಮರ ಜಯಂತಿ ಜತೆಗೆ ಅವರ ಕಂಡ ಕನಸು ನನಸಾಗಿಸಲು ಶ್ರಮಿಸಬೇಕಿದೆ. ಸಂವಿಧಾನ ಕೇವಲ ದಲಿತರಿಗೆ ರಕ್ಷಣೆ ನೀಡುತ್ತದೆ ಎಂಬ ಕಲ್ಪನೆ ತಪ್ಪು. ಅದು ಸಮಸ್ತ ಭಾರತೀಯರ ರಕ್ಷಕ ಎಂದು ಹೇಳಿದರು.
ಮಾದಿಗ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಮಂತ ಕಟ್ಟಿಮನಿ ಮಾತನಾಡಿ, ನಗರದಲ್ಲಿ ಬಾಬುಜಗಜೀವನ್ ರಾಮ್ ಭವನಕ್ಕೆ ಸ್ಥಳದ ಜತೆಗೆ 25 ಕೋಟಿ ಅನುದಾನ ಒದಗಿಸಬೇಕು ಹಾಗೂ ಲೋಕಮಂಚ್ ಟ್ರಸ್ಟ್ಗೆ ನಿವೇಶನ ನೀಡಬೇಕು ಎಂದು ಬೇಡಿಕೆ ಮಂಡಿಸಿದರು.
ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದು ಪಾಟೀಲ್ ಮಾತನಾಡಿದರು. ಟ್ರಸ್ಟ್ ಜಿಲ್ಲಾಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು. ಸಾಠೆ ಪುತ್ರ ವಿಲಾಸ ಸಾಠೆ, ಪ್ರಮುಖರಾದ ಜಿ.ಕೆ. ಗೋಖಲೆ, ರಾಜು ಕಡ್ಯಾಳ, ಅಂಬಣ್ಣ ಅರೋಲಿಕರ್, ಮಾರುತಿ ಬೌದ್ಧೆ, ಸಂಜಯ ಜಾಗೀರದಾರ, ಅಮೃತರಾವ ಚಿಮಕೋಡೆ, ಫನರ್ಾಂಡಿಸ್ ಹಿಪ್ಪಳಗಾಂವ, ರಾಜೇಂದ್ರಕುಮಾರ ಗಂದಗೆ, ಇ.ಎನ್.ಓಂಕಾರ, ಯಾಮರಡ್ಡಿ, ಶಿವಶರಣಪ್ಪ ಹುಗ್ಗಿಪಾಟೀಲ್, ಶಿವಶಂಕರ ಟೋಕರೆ, ಸ್ವಾಮಿದಾಸ ಕೆಂಪೆನೋರ್, ಅಭಿ ಕಾಳೆ, ವಿಜಯಕುಮಾರ ಸೋನಾರೆ, ಡಾ.ದೇವಿದಾಸ ತುಮಕುಂಟೆ, ಸಂಜುಕುಮಾರ ಸೂರ್ಯವಂಶಿ ಇತರರಿದ್ದರು. ಸುಭಾಷ ರತ್ನ ಸ್ವಾಗತಿಸಿದರು. ಪ್ರವೀಣಚಂದ್ರ ನಿರೂಪಣೆ ಮಾಡಿದರು. ರಾಘವೇಂದ್ರ ಮುತ್ತಂಗಿಕರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net