ಸಂವಿಧಾನ ಪೀಠಿಕೆ ವಾಚನದ ಮೂಲಕ ವಿವಾಹ

02rajesh5
Published on

ಚಾಮರಾಜನಗರ: ದೇಶದ ಪರಮೋಚ್ಛ ಗ್ರಂಥವಾದ ಸಂವಿಧಾನ ಪೀಠಿಕೆಯನ್ನು ವಾಚನ ಮಾಡುವ ಮೂಲಕ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಾಲೂಕಿನ ನಲ್ಲೂರು ಗ್ರಾಮದ ನಿವಾಸಿ ಮಹದೇವಯ್ಯ ಮತ್ತು ಅಂಗನವಾಡಿ ಶಿಕ್ಷಕಿ ನಾಗರತ್ನ ಅವರ ಪುತ್ರ ಸುಭಾಷ್ ಹಾಗೂ ಕೋಟಂಬಳ್ಳಿ ಗ್ರಾಮದ ಎಸ್.ಮಹದೇವಯ್ಯ ಮತ್ತು ಭಾಗ್ಯಮ್ಮ ಅವರ ಪುತ್ರಿಯಾದ ಎಂ.ಅಮೃತ ಅವರ ವಿವಾಹ ಮಹೋತ್ಸವವನ್ನು ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಲಾಗಿತ್ತು. ಮೈಸೂರಿನ ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷರಾದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಕೊಳ್ಳೇಗಾಲದ ಚೇತವನ ಬುದ್ಧ ವಿಹಾರದ ಮನೋಃರಖ್ಖಿತ ಭಂತೇಜಿ ಅವರ ನೇತೃತ್ವದಲ್ಲಿ ನೆರವೇರಿದ ಮದುವೆಯಲ್ಲಿ ನವಜೋಡಿಗಳು ಸಂವಿಧಾನದ ಪೀಠಿಕೆಯನ್ನು ವಾಚನ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಸಂದರ್ಭದಲ್ಲಿ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಬಹುಶಃ ನಾವು ಯಾವುದನ್ನೂ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಆದರೇ ಭಗವಾನ್ ಬುದ್ಧರು ನೀಡಿರುವ ಬೌದ್ಧಧರ್ಮದ ಅನುಸಾರ ವೃಜ್ಞಾನಿಕ ತಳಹದಿಯಲ್ಲಿ ಇಂತಹ ವಿವಾಹಗಳು ನಡೆಯುವುದು ಹೆಚ್ಚಾಗಬೇಕಿದೆ. ದೇಶಕ್ಕೆ ಸಮಾನತೆಯನ್ನು ಸಾರುವ ಸಂವಿಧಾನದ ಪೀಠಿಕೆಯನ್ನು ವಾಚನ ಮಾಡುವ ಮೂಲಕ ಹೊಸ ಜೀವನಕ್ಕೆ ಜೋಡಿಗಳು ಕಾಲಿಟ್ಟಿರುವುದು ಸಂತೋಷದ ವಿಚಾರಚಾಗಿದೆ ಎಂದರು.

ನಮ್ಮ ಬದುಕಿಗೇ ಬಾಳ ಸಂವಿಧಾನ ಎಷ್ಟು ಮುಖ್ಯವೋ ಹಾಗೇ ಅಂಬೇಡ್ಕರ್ ಸಂವಿಧಾನವೂ ಅಷ್ಟೇ ಮುಖ್ಯವಾಗಿದೆ. ಸರಳ ಮತ್ತು ಅರ್ಥಪೂರ್ಣವಾದ ಇಂತಹ ಕಾರ್ಯಕ್ರಮಗಳು ಹೆಚ್ಚಾಗುವ ಮೂಲಕ ಸಮಸಮಾಜ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.

ವಿಭಿನ್ನ ಆಚರಣೆ:

ಇತ್ತೀಚಿನ ದಿನಗಳಲ್ಲಿ ಬೌದ್ಧಧರ್ಮದ ಪ್ರಕಾರ ವಿವಾಹವಾಗುವುದು ಸಾಮಾನ್ಯವಾಗಿದೆ. ಆದರೇ ಸಂವಿಧಾನ ಪೀಠಿಕೆಯನ್ನು ವಾಚನ ಮಾಡುವ ಮೂಲಕ ವಿಭಿನ್ನವಾಗಿ ವಿವಾಹ ಕಾರ್ಯ ನಡೆದಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಹಲವಾರು ಬೌದ್ಧ ಬಿಕ್ಕುಗಳು, ಉಪಾಸಕರು, ಉಪಾಸಕಿಯರು ಹಾಗೂ ಗಣ್ಯರು ನೆರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net