

ಹಾಸನ: ಭಾರತದ ಸಂವಿಧಾನ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಮಂಗಳವಾರ ನಗರದ ಡಿಸಿ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸಂವಿಧಾನ ಪೀಠಿಕೆ ಓದುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು, ಸಂವಿಧಾನ ಎನ್ನುವುದು ಒಬ್ಬರಿಗೆ ಮಾತ್ರ ಸೀಮಿತವಲ್ಲ. ದೇಶದ ಇಡೀ ಎಲ್ಲ ಪ್ರಜೆಗಳಿಗೆ ಹಾಗೂ ನಮಗೆಲ್ಲರಿಗೂ ಸ್ವಂತದ್ದು ಆಗಿದೆ. ಸಂವಿಧಾನವು ನಮಗೆ ಸೇರಿದ್ದು ಎಂದು ಹೇಳಬೇಕು. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯವನ್ನು ಕೋರುತ್ತೇನೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಎಲ್ಲರೂ ದುಡಿಯೋಣ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್ ಮಾತನಾಡಿ, ಭಾರತ ದೇಶಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಕೊಡುಗೆ ಅಪಾರವಾಗಿದ್ದು, ಅಂಬೇಡ್ಕರ್ ಸಾಹೇಬರು ದಲಿತ ಸಮುದಾಯಕ್ಕೆ ಅಲ್ಲದೆ ಎಲ್ಲ ಜಾತಿಯ, ಎಲ್ಲ ಬಡವರ ಪರವಾಗಿ ಹೋರಾಟ ಮಾಡಿದ್ದಾರೆ. ಬಿ.ಆರ್. ಅಂಬೇಡ್ಕರ್ ಅವರು ಆರ್ಥಿಕ ತಜ್ಞ, ನೀರಾವರಿ ತಜ್ಞ , ಸಾಮಾಜಿಕ ತಜ್ಞರಷ್ಟೇ ಅಲ್ಲದೆ ಆರ್‌ಬಿಐ ಇಷ್ಟು ಎತ್ತರಕ್ಕೆ ಬೆಳೆಯುವುದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅನನ್ಯ. ಆದರೆ ದುರ್ದೈವದ ಸಂಗತಿ ಎಂದರೆ ಅಂಬೇಡ್ಕರ್ ಸಾಹೇಬರನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿರುವುದು ನಮ್ಮ ದೇಶದ ದುರಂತ. ಸಂವಿಧಾನದ ಪೀಠಿಕೆಯನ್ನು ಎಲ್ಲ ಜಿಲ್ಲಾ ಕಚೇರಿಗಳಲ್ಲಿ ತಾಲೂಕು ಕಚೇರಿಗಳಲ್ಲಿ ಹೋಬಳಿ ಮಟ್ಟದಲ್ಲಿ ಗ್ರಾಮಗಳಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಜೈ ಭೀಮ್ ಬ್ರಿಗೇಡ್ ಸಂಘಟನೆಯಿಂದ ಹೊರ ತಂದಿರುವ ಹೊಸ ವರ್ಷದ ಕ್ಯಾಲೆಂಡರ ಅನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು. ಸಿಜಿಎಂ ಒಕ್ಕೂಟದ ಎಂ.ವಿ. ಗೋವಿಂದರಾಜರವರು ಸಂವಿಧಾನದ ಪೀಠಿಕೆಯನ್ನು ಸಭೆಯಲ್ಲಿ ಓದುವುದರ ಮುಖಾಂತರ ಸಂವಿಧಾನದ ದಿನಾಚರಣೆಗೆ ಗೌರವ ಸಲ್ಲಿಸಲಾಯಿತು. ಇದೆ ವೇಳೆ ಜಿಲ್ಲಾಧಿಕಾರಿಗಳನ್ನು ಜೈಭೀಮ್ ಬ್ರಿಗೆಡ್‌ನಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೈಭೀಮ್ ಬ್ರಿಗೇಡ್ ಸಂಘಟನೆ ಕಾರ್ಯದರ್ಶಿ ಸಿ. ಚಂದ್ರಶೇಖರ್, ನಗರಸಭೆ ಮಾಜಿ ಸದಸ್ಯರಾದ ಯಶವಂತ್, ಎಚ್.ಎಂ. ಪ್ರಕಾಶ್, ಜನಪ್ರಿಯ ಆಸ್ಪತ್ರೆ ಸಿಇಒ ಡಾ. ಅಬ್ದುಲ್ ಬಶೀರ್, ಕಲಾವಿದರ ಸಂಘದ ಅಧ್ಯಕ್ಷ ಕುಮಾರ್, ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರ ಒಕ್ಕೂಟದ ಕಾರ್ಯದರ್ಶಿ ಹರೀಶ್ ಉಳುವರೇ, ಗೋವಿಂದರಾಜು, ರಂಗಸ್ವಾಮಿ, ತಾಲೂಕು ಅಧ್ಯಕ್ಷರಾದ ಶಂಕರ್, ಸತೀಶ್ ಕಬ್ಬಳ್ಳಿ, ರಾಮು, ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ಬಾಗೇವಾಳು, ರಂಗಸ್ವಾಮಿ, ಎಸ್.ಎಸ್. ಕೇಶವಣ್ಣ ಮುಸತ್ತೂರು, ಹಂದಿ ಜೋಗಿ ಸಂಘದ ಜಿಲ್ಲಾ ಮುಖಂಡರಾದ ರುದ್ರೇಶ್, ಚಂದ್ರು, ಸೋಮು, ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.