

ಬೀದರ್: ಸಂವಿಧಾನ ಕುರಿತು ಜನಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಜ. 5ರಿಂದ 26ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಹೇಶ ಗೋರನಾಳಕರ್ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 5ರಂದು ನಗರದ ಡಾ.ಅಂಬೇಡ್ಕರ್ ವೃತ್ತದ ಹತ್ತಿರ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಪಾದಯಾತ್ರೆ ಮೂಲಕ ಜ.26 ರವರೆಗೆ ಅಭಿಯಾನ ನಡೆಯಲಿದೆ. ಮೊದಲ ಹಂತವಾಗಿ ಅಭಿಯಾನ ಬೀದರ್ ತಾಲೂಕಿನ ಪ್ರತಿ ಗ್ರಾಮದಲ್ಲಿ ಸಂಚರಿಸಿ ಮನೆ, ಮನೆಗೆ ತೆರಳಿ ಸಂವಿಧಾನ ಬಗ್ಗೆ ಮತ್ತು ಸಂವಿಧಾನಬದ್ಧ ಹಕ್ಕುಗಳು ಪಡೆಯುವ ಬಗ್ಗೆ ಜಾಗೃತಿ ಮೂಡಿಸಲಿದೆ. ಬರುವ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಅಭಿಯಾನ ನಡೆಯಲಿದೆ ಎಂದರು.
ಟೀಮ್ ಯುವಾ ಸಂಘಟನೆ ಮುಖ್ಯಸ್ಥ ವಿನಯ್ ಮಾಳಗೆ ಮಾತನಾಡಿ, ಅಭಿಯಾನ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಜಗದೀಶ ಬಿರಾದಾರ ಮಾತನಾಡಿ, ಪ್ರತಿ ಶಾಲೆಗಳಲ್ಲಿ ರಾಷ್ಟ್ರ ಗೀತೆ, ನಾಡ ಗೀತೆ ಜತೆಯಲ್ಲಿ ಸಂವಿಧಾನದ ಪೀಠಿಕೆ ಓದಿಸಲು ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಧಮ್ಮಯಾನ ಟ್ರಸ್ಟ್ ಅಧ್ಯಕ್ಷ ಕಿಶೋರ ನವಲಸಪುರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶೇಖ್ ಷರೀಫ್ಮಿಯ್ಯಾ, ಸುಬ್ಬಣ್ಣ ಕರಕನಳ್ಳಿ, ವಿನೋದ ರತ್ನಕರ್, ಸಂತೋಷ ಬೋರೆ, ಸೂರ್ಯಕಾಂತ ಸಾಧೂರೆ, ರತ್ನದೀಪ ಕಸ್ತೂರೆ, ವಿಜಯ ರಾಮಬಾಣ, ಶ್ರೀಧರ್ ಸೋಮನೋರ, ವೈಜಿನಾಥ ಸಾಗರ್, ಧರ್ಮಪಾಲ ಜ್ಯೋತಿ, ಪ್ರಕಾಶ ರಾವಣ, ಸಂಜುಕುಮಾರ ಇತರರಿದ್ದರು.