

ಬೇಲೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನ ದೇಶದ ಜನರಿಗೆ ಸ್ವಾತಂತ್ರೃ, ಸಮಾನತೆ, ಸಹೋದರತೆ, ಬ್ರಾತೃತ್ವ, ಸಮಾಜವಾದಿ, ಜಾತ್ಯತೀತ ಭಾವನೆಗಳನ್ನು ಮೂಡಿಸಿದ ಶ್ರೇಷ್ಠ ಗ್ರಂಥವಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಲಕ್ಷ್ಮಣ್ ಹೇಳಿದರು.
ಸಂವಿಧಾನ ದಿನದ ಅಂಗವಾಗಿ ದಸಂಸ (ಅಂಬೇಡ್ಕರ್ ವಾದ) ಮತ್ತು ಜಯ ಕರ್ನಾಟಕ ಸಂಘಟನೆಯಿಂದ ಬೇಲೂರು ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದರು.
1949ನೇ ನವೆಂಬರ್ 26 ರಂದು ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿದ ದಿನವಾಗಿದೆ. ಅಂದಿನಿಂದ ಇಂದಿನವರೆಗೂ ನಮ್ಮ ಸಂವಿಧಾವನ್ನು ಒಪ್ಪಿ ದೇಶದ ಜನರು ಬದುಕುತಿದ್ದಾರೆ. ಅಲ್ಲದೇ, ಆಧುನಿಕ ಭಾರತದಲ್ಲಿ ಸಮಾನತೆಯನ್ನು ಸಾರುವ ನಿಟ್ಟಿನಲ್ಲಿ ನಮ್ಮ ಸಂವಿಧಾನವು ಮಹತ್ತರವಾದ ಮೈಲುಗಲ್ಲಾಗಿದೆ. ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿರುವ ಪ್ರತಿಯೊಬ್ಬರೂ ಸಂವಿಧಾನದ ಆಶಯಗಳು ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ ಎಂದರು.
ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರಾಜು ಮಾತನಾಡಿ, ವಿಶ್ವದ ಅತಿದೊಡ್ಡ ದೇಶವಾದ ಭಾರತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿದ ಸಂವಿಧಾನವು ದೇಶದ ಜನರಿಗೆ ಪ್ರೇರಕ ಶಕ್ತಿಯಾಗಿದೆ ಎಂದರು.
ಭಾರತದ ತಳ ಸಮುದಾಯಗಳಿಗೆ ಸಮಾನ ಹಕ್ಕುಗಳನ್ನು ನೀಡಿ ಸರ್ವರಿಗೂ ಸಮಪಾಲು, ಸಮಬಾಳು ದೊರಕಿಸಿಕೊಡಲು ಸಂವಿಧಾನವೇ ಕಾರಣ. ಆದ್ದರಿಂದ ಸಂವಿಧಾನ ಸಂಪೂರ್ಣ ಜಾರಿಗೆ ಸರ್ಕಾರಗಳು ಮುಂದಾಗಬೇಕಿದೆ ಎಂದರು.
ಈ ಸಂದರ್ಭ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸೋಮೇಶ್, ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷ ಶ್ರೇಯಸ್, ಉಪಾಧ್ಯಕ್ಷ ಗುರುಮೂರ್ತಿ, ಹೋಬಳಿ ಅಧ್ಯಕ್ಷ ಜಯಣ್ಣ, ಆಟೋ ಘಟಕದ ಅಧ್ಯಕ್ಷ ಲಕ್ಷ್ಮಣ್, ದಸಂಸ (ಅಂಬೇಡ್ಕರ್ ವಾದ) ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ್, ಮುಖಂಡರಾದ ಸತೀಶ್, ವಿಶ್ವ, ಚಂದ್ರಪ್ಪ ಸೇರಿದಂತೆ ಇತರರಿದ್ದರು.