ಸಂವಹನ ಕೌಶಲ ವೃದ್ಧಿಸಿಕೊಳ್ಳಬೇಕು

9KITTUR1
Published on

ಚನ್ನಮ್ಮನ ಕಿತ್ತೂರು: ತಂದೆ-ತಾಯಿ ನಿಮ್ಮ ಮೇಲಿಟ್ಟ ಭರವಸೆ ಉಳಿಸಿಕೊಂಡು, ಚೆನ್ನಾಗಿ ಓದಿ ಬದುಕಿನ ದಡ ಸೇರಿ ಅವರ ಆಶಯ ಪೂರ್ಣಗೊಳಿಸಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಪಟ್ಟಣದ ರಾಜಗುರು ಗುರುಸಿದ್ದ ಸ್ವಾಮೀಜಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಪಿಯುಸಿ ಜೀವನದ ಬಹುಮುಖ್ಯ ಘಟ್ಟ. ಏಕಾಗ್ರತೆಯಿಂದ ಓದಿದಷ್ಟೂ ಜೀವನ ಸುಗಮವಾಗುತ್ತದೆ. ನಿಷ್ಠೆಯಿಂದ ಕೆಲಸ ಮಾಡಿದರೆ ಎಲ್ಲರೂ ಅಂದುಕೊಂಡಿದನ್ನು ಸಾಧಿಸಬಹುದು. ಮೋಜಿನಲ್ಲಿ ಸಮಯ ವ್ಯರ್ಥ ಮಾಡಬಾರದು. ಕನ್ನಡದ ಜತೆಗೆ ಇಂಗ್ಲಿಷ್ ಭಾಷೆ ಕೂಡ ಕಲಿತರೆ ಎಲ್ಲಿ ಬೇಕಾದರೂ ಬದುಕಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಿವಮೊಗ್ಗದ ಗಂಗೋತ್ರಿ ಸ್ವತಂತ್ರ ಪಿಯು ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ರೇಣುಕಾ ರಾಧ್ಯ ಮಾತನಾಡಿ, ಗೆಲುವಿಗೆ ಬಡತನ ಸಿರಿತನ ಇಲ್ಲ. ಯಾವುದೇ ಸಾಧನೆಗೆ ಭಾಗವಹಿಸುವುದು ಮುಖ್ಯ. ಈ ಜಗತ್ತಿನಲ್ಲಿ ಎಲ್ಲರೂ ಓಡುವ ಕುದುರೆಗೆ ಬೆಲೆ ಕೊಡುತ್ತಾರೆ. ಹಾಗೆ ಸಾಧಕರನ್ನು ತಾನಾಗಿಯೇ ಜಗತ್ತು ತಿರುಗಿ ನೋಡುತ್ತದೆ ಎಂದರು.

ರಾಜಗುರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಕಿತ್ತೂರಿನ ಈ ಸರ್ಕಾರಿ ಕಾಲೇಜು ಖಾಸಗಿ ಅವರನ್ನೂ ಮೀರಿಸುವಂತೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡುತ್ತಾರೆ. ಇದು ನಮಗೆ ಹೆಮ್ಮೆ ಎಂದರು.

ಕಾಲೇಜಿನ ಪ್ರಾಚಾರ್ಯ ಜಿ.ಎಂ. ಗಣಾಚಾರಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾಸಾಧಕರಿಗೆ ಬಹುಮಾನ ವಿತರಣೆ ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು.

ಉದ್ಯಮಿ ಸುರೇಶ ಜೋರಾಪುರ, ಪಿಯು ಬೆಳಗಾವಿ ಉಪನಿರ್ದೇಶಕ ಎಂ.ಎಂ. ಕಾಂಬಳೆ, ಪ್ರಾಚಾರ್ಯರಾದ ಬಿ.ವೈ. ಹನ್ನೂರ, ಶ್ರೀಶೈಲ ಕಾಪಶಿ, ಪ್ರೊ.ಯು.ವೈ. ಸನದಿ, ರಮೇಶ ಶಾಪೂರ, ಮಮತಾ ಹಿರೇಮಠ, ವಿ.ಜಿ. ಬಡಿಗೇರ ಹಾಗೂ ಕಾಲೇಜಿನ ಸಹ ಸಿಬ್ಬಂದಿ, ವಿದ್ಯಾರ್ಥಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net