ಸಂವಹನ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ನೃತ್ಯ, ಚಲನೆ ಚಿಕಿತ್ಸೆ ಪರಿಣಾಮಕಾರಿ

mysore
Published on

ಮೈಸೂರು: ಸಂವಹನ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ನೃತ್ಯ ಮತ್ತು ಚಲನೆ ಚಿಕಿತ್ಸೆ(ಡಿಎಂಟಿ) ವಿಧಾನ ಪರಿಣಾಮಕಾರಿಯಾಗಿದೆ ಎಂದು ಭಾರತೀಯ ಆಡಳಿತ ಸಹವರ್ತಿ(ಐಎಎಫ್), ಆಕಾಂಕ್ಷಾ ಸಿಎಸ್‌ಆರ್ ಕರ್ನಾಟಕದ ನೋಡಲ್ ಉಸ್ತುವಾರಿ ಪ್ರೀತಮ್ ಕುಮಾರ್ ಹೇಳಿದರು.

ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಸೃಜನಾತ್ಮಕ ಚಲನೆ ಚಿಕಿತ್ಸಾ ಕಾರ್ಯಾಗಾರ ‘ಸ್ವಯಂ ಅನ್ವೇಷಿಸಿ’ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಡಿಎಂಟಿಯನ್ನು ಸೃಜನಾತ್ಮಕ ಚಲನ ಚಿಕಿತ್ಸೆ ಎಂದೇ ಕರೆಯಲಾಗುತ್ತದೆ. ಇದು ದೈಹಿಕ, ಭಾವನಾತ್ಮಕ, ಜ್ಞಾನಾತ್ಮಕ, ಸಾಮಾಜಿಕ ಮತ್ತು ವರ್ತನಾ ಕ್ಷೇಮಾಭಿವೃದ್ಧಿ ಹೆಚ್ಚಿಸಲು ಸಹಾಯಕವಾಗಿದೆ. ಚಲನೆ ಮತ್ತು ನೃತ್ಯವನ್ನು ಒಗ್ಗೂಡಿಸಿರುವ ಆಧುನಿಕ ಮನೋಚಿಕಿತ್ಸಾ ವಿಧಾನವಾಗಿದೆ ಎಂದರು.

ಚಲನೆ ಮತ್ತು ಭಾವನೆಗಳ ನಡುವೆ ಸಂಪರ್ಕದಲ್ಲಿ ಬೇರೂರಿರುವ ಈ ವಿಧಾನವು ಸಾಂಪ್ರದಾಯಿಕ ನೃತ್ಯ ಸೂಚನೆಗಿಂತ ಅಭಿವ್ಯಕ್ತಿಶೀಲವಾಗಿದೆ. ಚಲನೆಯ ಮೂಲಕ ವೈಯಕ್ತಿಕ ಬೆಳವಣಿಗೆ ಮತ್ತು ಏಕೀಕರಣವನ್ನು ಸುಗಮಗೊಳಿಸುತ್ತದೆ ಎಂದರು.

ಔದ್ಯೋಗಿಕ, ಭೌತಚಿಕಿತ್ಸೆ, ಎಬಿಎ ಚಿಕಿತ್ಸೆಯಂತಹ ಇತರ ಚಿಕಿತ್ಸೆಗಳೊಂದಿಗೆ ಸಂಯೋಜಿಸಿದಾಗ ಧನಾತ್ಮಕ ಫಲಿತಾಂಶ ಬರಲಿದೆ. ಇದನ್ನು ಉತ್ತೇಜಿಸುವ ಮೂಲಕ ಸ್ವಲೀನತೆ, ಎಡಿಎಚ್‌ಡಿ, ವರ್ತನೆಯ ಸಮಸ್ಯೆಗಳ ಮತ್ತು ಸೆರೆಬ್ರಲ್ ಪಾಲ್ಸಿ ಹೊಂದಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ನಿಣಾರ್ಯಕ ಪಾತ್ರ ವಹಿಸುತ್ತದೆ ಎಂದರು.

ವಿಕಸನಗೊಳ್ಳುತ್ತಿರುವ ಪುನರ್ವಸತಿ ಗಮನಿಸಿದರೆ ಡಿಎಂಟಿಯಂತಹ ಪರ್ಯಾಯ ಚಿಕಿತ್ಸಕ ವಿಧಾನಗಳಲ್ಲಿ ವೃತ್ತಿಪರರು, ಆರೈಕೆ ಮಾಡುವರಿಗೆ ತರಬೇತಿ ನೀಡುವುದು ಅಗತ್ಯವಾಗಿದೆ ಎಂದರು.

ಸಿಎಫ್‌ಟಿಆರ್‌ಐ ವಿಜ್ಞಾನಿ ಡಾ.ಪ್ರಕಾಶ್ ಎಂ.ಹಲಾಮಿ, ಆಯಿಷ್‌ನ ನಿರ್ದೇಶಕಿ ಪ್ರೊ.ಎಂ.ಪುಷ್ಪವತಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net