

ಚಿತ್ರದುರ್ಗ: ಕೌಟುಂಬಿಕ ಹಿಂಸೆಯಿಂದ ರಕ್ಷಣೆಗಿರುವ ಕಾಯ್ದೆ ಕುರಿತು ಮಹಿಳೆಯರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜೆಎಂಎಫ್‌ಸಿ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಆರ್. ಸಹನಾ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ ಕುರಿತು 2 ದಿನಗಳ ಓರಿಯಂಟೇಷನ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಜಾರಿಗೆ ಬಂದಿದ್ದರೂ ಸಾಕಷ್ಟು ಪ್ರಕರಣಗಳು ವರದಿಯಾಗುವುದಿಲ್ಲ. ಕಾರಣ ಕಾಯ್ದೆ ಕುರಿತು ಮಹಿಳೆಯರಲ್ಲಿ ಅರಿವಿಲ್ಲ. ಹಾಗಾಗಿ ನಾವೆಲ್ಲರೂ ಸೇರಿ ಅರಿವು ಮೂಡಿಸಿದಾಗ ಕಾಯ್ದೆ ಸಮರ್ಪಕ ಅನುಷ್ಠಾನ ಸಾಧ್ಯವಾಗಲಿದೆ ಎಂದರು.
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ ಸಮಿತಿ ಅಧ್ಯಕ್ಷೆ ಡಿ.ಕೆ. ಶೀಲಾ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005 ರಿಂದ ಜಾರಿಗೆ ಬಂದಿದೆ. ಮಹಿಳೆ ಯಾವುದೇ ಧರ್ಮಕ್ಕೆ ಸೇರಿರಲಿ, ಯಾವುದೇ ಸಾಮಾಜಿಕ ಹಿನ್ನಲೆ ಹೊಂದಿರಲಿ ಮಹಿಳೆಯ ಸಂರಕ್ಷಣೆ ಕಾಯ್ದೆ ಆಕೆಗೆ ಅನ್ವಯವಾಗಲಿದೆ ಎಂದರು.
ಕಾಯ್ದೆಯಡಿ ದಾಖಲಾದ ಪ್ರಕರಣವನ್ನು 60 ದಿನದೊಳಗೆ ಮುಕ್ತಾಯಗೊಳಿಸಬೇಕು. ಮಹಿಳೆಯರ ಮೇಲೆ ದೈಹಿಕ ಹಲ್ಲೆ, ನಿಂದನೆ, ಮಾನಸಿಕ, ಭಾವನಾತ್ಮಕ ಹಾಗೂ ಕೌಟುಂಬಿಕ ಹಿಂಸೆಗಳು ಕಾಯ್ದೆ ವ್ಯಾಪ್ತಿಗೆ ಬರುತ್ತವೆ. ಕಾಯ್ದೆ ಬಲವಿದ್ದರೂ ಕೌಟುಂಬಿಕ ಹಿಂಸೆ ಪ್ರಕರಣಗಳು ಕಡಿಮೆಯಾಗಿಲ್ಲ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್ ಮಾತನಾಡಿ, ಈ ಕಾಯ್ದೆ ಅನ್ವಯ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಹಾಗೂ ಎಲ್ಲ ತಾಲೂಕಿನಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಂರಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಹಿಳೆಯರಿಗೆ ನೆರವು ನೀಡಲು ಸಾಂತ್ವಾನ ಕೇಂದ್ರಗಳು, ಸ್ವ-ಆಧಾರ್ ಕೇಂದ್ರ ರಕ್ಷಣಾ ಗೃಹಗಳೆಂದು ಅಧಿಸೂಚಿಸಲಾಗಿದೆ ಎಂದರು.
ವಕೀಲ ಸಾ.ಚಿ. ರಾಜ್‌ಕುಮಾರ್, ಮೊಳಕಾಲ್ಮೂರು ಸಿಪಿಐ ವಸಂತ್‌ಅಸೂಡೆ ಉಪನ್ಯಾಸ ನೀಡಿದರು. ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಅಭಿವನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಎಸ್. ವಿಜಯ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್.ಪವಿತ್ರಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಮತ್ತಿತರರು ಇದ್ದರು.