

ಕಲಬುರಗಿ: ಪ್ರೀತಿ, ಪ್ರೇಮದ ವ್ಯಾಮೋಹದಲ್ಲಿ ಸಂಯಮ ಕಳೆದುಕೊಂಡು ಜೈಲು ಶಿಕ್ಷೆಗೆ ಒಳಗಾಗುತ್ತಿರುವ ೧೯, ೨೦, ೨೧ ವಯಸ್ಸಿನ ಯುವಕರೇ ಹೆಚ್ಚಾಗುತ್ತಿದ್ದು, ಪೋಕ್ಸೋ ಅಡಿ ಶಿಕ್ಷೆ ಗೀಡಾದವರಿಗೆ ಸನ್ನಡತೆ ಆಧಾರದಲ್ಲೂ ಶಿಕ್ಷೆಯಿಂದ ವಿನಾಯಿತಿ ಇಲ್ಲ. ಆದ್ದರಿಂದ ಯುವಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಶ್ರೀನಿವಾಸ ನವಲೆ ಸಲಹೆ ನೀಡಿದರು.
ಪೂಜ್ಯ ಬಸವರಾಜಪ್ಪ ಅಪ್ಪ ಸಭಾಗೃಹದಲ್ಲಿ ಮಿಷನ್ ಸುರಕ್ಷಾ ಕಾರ್ಯಕ್ರಮದ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಪೊಲೀಸ್, ಮಹಿಳಾ, ಮಕ್ಕಳ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ೧೦೯೮, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಯುಕ್ತಾಶ್ರಯದಲ್ಲಿ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಪೋಕ್ಸೋ, ಬಾಲ್ಯ ವಿವಾಹ ನಿಷೇಧ, ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತ ತರಬೇತಿ, ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ಅಧಿಕಾರಿಗಳಿಗೆ ಪ್ರಕರಣ ಕಂಡು ಬಂದರೆ ಪ್ರಾಧಿಕಾರ, ಪೊಲೀಸ್, ಮಹಿಳಾ ಸೇರಿ ಇತರೆ ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸವನ್ನಾದರೂ ಮಾಡಬೇಕು. ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ೩೦೦ ಕೈದಿಗಳಿದ್ದು, ೧೫೦ಕ್ಕಿಂತ ಹೆಚ್ಚು ಶಿಕ್ಷಿತರು ಪೋಕ್ಸೋ ಕಾಯ್ದೆ ಅಡಿ ಇದ್ದವರೇ ಇದ್ದು, ಅದರಲ್ಲಿ ೨೦ರ ಆಸುಪಾಸಿನ ವಯಸ್ಸಿನವರೆ ಹೆಚ್ಚಾಗಿದ್ದಾರೆ. ಶಿಕ್ಷೆ ೨೦ ಆದರೆ ಅವರ ಜೀವನವೇ ಜೈಲಿನಲ್ಲೇ ಮುಗಿಯುತ್ತದೆ. ಈ ಬಗ್ಗೆ ತಿಳಿಸಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ಬಾಲಕಾರ್ಮಿಕ, ಅಪಹರಣ, ಮಹಿಳಾ ದೌರ್ಜನ್ಯ ಸೇರಿ ಮಹಿಳಾ ಮತ್ತು ಮಕ್ಕಳ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ತಕ್ಷಣ ಆರಂಭಿಸಿ, ೬೦ ದಿನದಲ್ಲಿ ಪೂರ್ಣಕ್ಕೆ ಸೂಚಿಸಲಾಗಿದೆ. ತನಿಖೆ ಪೂರ್ಣಗೊಳಿಸದಿದ್ದರೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಪೋಕ್ಸೋ ಶಿಕ್ಷೆ ಆಗಿದೆ. ಪ್ರತಿ ಗುರುವಾರ ತೆರೆದ ಮನೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿAಗ್ ಮೀನಾ ಮಾತನಾಡಿ, ಪಿಡಿಒ ಪದದಲ್ಲಿ ಡಿ ಎಂದರೆ ಡೆವಲ್ಪಮೆಂಟ್. ಅಭಿವೃದ್ಧಿ ಎಂದರೆ ಬರೀ ಕಟ್ಟಡ, ನಿರ್ಮಾಣ, ಮೂಲಸೌಲಭ್ಯ ನೀಡುವುದು ಮಾತ್ರವಲ್ಲ. ಮಾನವ ಸಂಪನ್ಮೂಲ ಅಭಿವೃದ್ಧಿ ಆಗಬೇಕು. ಆ ನಿಟ್ಟಿನಲ್ಲಿ ಪಿಡಿಒ ಸೇರಿ ಗ್ರಾಪಂ ಅಧಿಕಾರಿಗಳು ಪೋಷಣ್ ಅಭಿಯಾನ, ಅಂಗನವಾಡಿ, ಶಾಲೆಗಳಲ್ಲಿ ಹಾಜರಾತಿ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲೂ ಕೆಲಸ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಅಧಿಕಾರಿಗಳು ಎದ್ದು ನಿಂತು ಸಮಸ್ಯೆಗಳ ವಿರುದ್ಧ ನಿಂತಾಗ ಬದಲಾವಣೆ ಸಾಧ್ಯ. ಮಿಷನ್ ಸುರಕ್ಷಾ ಯೋಜನೆ ಮೂಲಕ ಐದು ಲಕ್ಷ ಮಕ್ಕಳಿಗೆ ತರಬೇತಿ ನೀಡಲಾಗಿದೆ. ಪದವಿ, ಶಾಲೆ, ಅಂಗನವಾಡಿಯಲ್ಲಿ ಗುಡ್ ಟಚ್, ಬ್ಯಾಡ್ ಟಚ್ ಮಾಹಿತಿ ನೀಡಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿ ಸಭೆ ಕನಿಷ್ಠ ಮೂರು ತಿಂಗಳಿಗೊಮ್ಮೆ ಕರೆದು, ಜಾಗೃತಿ ಮೂಡಿಸಬೇಕು ಎಂದರು.
ಅಪ್ಪಾ ಪಬ್ಲಿಕ್ ಶಾಲೆ ಪ್ರಾಂಶುಪಾಲ ಶಂಕರಗೌಡ ಹೊಸಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನವೀನಕುಮಾರ ಯು, ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ.ರಾಘವೇಂದ್ರ ಭಟ್, ಹರೀಶ ಜೋಗಿ ಇತರರಿದ್ದರು.