

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶನಿವಾರ ರಾತ್ರಿ ಹೊಸ ವರ್ಷಾಚರಣೆಯ ಸಂಭ್ರಮ ಎಲ್ಲೆಡೆ ಮೇಳೈಸಿತ್ತು.
ಗತಿಸಿದ 2022ಕ್ಕೆ ಹೃದಯಸ್ಪರ್ಶಿ ವಿದಾಯ ಹೇಳಿ, 2023ರ ವರುಷವನ್ನು ಸಾಂಸ್ಕೃತಿಕ ನಗರಿಯ ಜನರು ಹರ್ಷೋಲ್ಲಾಸದಿಂದ ಬರಮಾಡಿಕೊಂಡರು.
ಕಳೆದ ಎರಡು ವರ್ಷ ಕರೊನಾ ಕಾರಣಕ್ಕೆ ವರ್ಷಾಚರಣೆ ಸಡಗರ ನಗರದಲ್ಲಿ ಕಳೆಗಟ್ಟಿರಲಿಲ್ಲ. ಅನೇಕ ನಿರ್ಬಂಧಗಳಿಂದಾಗಿ ಉತ್ಸಾಹದಿಂದ ಭಾಗವಹಿಸಲು ಆಗಿರಲಿಲ್ಲ. ಆದರೆ, ಈ ಸಲ ಕೋವಿಡ್ ಭಯದಿಂದ ಹೊರಬಂದಿರುವ ಜನರು, ಪ್ರವಾಸಿಗರು ಉತ್ಸಾಹದಿಂದ ವರ್ಷಾಚರಣೆಯ ಸಡಗರದಲ್ಲಿ ಮಿಂದೆದ್ದರು.
ಈ ಸಲ ಡಿಜೆ ಸಂಗೀತ ಕಾರ್ಯಕ್ರಮವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ, ಹೋಟೆಲ್, ಕ್ಲಬ್‌ಗಳಲ್ಲಿ ಅಬ್ಬರ ಸಂಗೀತ ಸದ್ದು ಅಡಗಿತ್ತು. ಇದು ಬಹಳಷ್ಟು ಗ್ರಾಹಕರಿಗೆ, ಯುವಕರಿಗೆ ನಿರಾಶೆ ಉಂಟು ಮಾಡಿತು.
ಉಳಿದಂತೆ ಹ್ಯಾಪಿ ನ್ಯೂ ಇಯರ್ ಕಾರ್ಯಕ್ರಮಗಳು ನಗರದ ವಿವಿಧೆಡೆ ಆಯೋಜಿಸಲಾಗಿತ್ತು. ನಗರದಲ್ಲಿರುವ ಒಟ್ಟು 21 ಸ್ಟಾರ್ ಹೋಟೆಲ್‌ನಲ್ಲೂ ಡಿ.31ರ ಸಂಭ್ರಮಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಿದ್ದವು. ಪಂಚತಾರಾ ಹೋಟೆಲ್‌ಗಳನ್ನು ಆಕರ್ಷಕವಾಗಿ ಸಿಂಗರಿಸಿ ಗ್ರಾಹಕರನ್ನು ಸ್ವಾಗತಿಸಲಾಯಿತು. ಸಂದೇಶ್ ದಿ ಪ್ರಿನ್ಸ್, ಕ್ರಿಸ್ಟಲ್ ಪಾರ್ಕ್, ರುಚಿ ದಿ, ವಿಂಡ್ ಫ್ಲವರ್, ಸೈಲೆಂಟ್ ಷೋರ್ಸ್, ಲಲಿತಮಹಲ್ ಸೇರಿದಂತೆ ಬಹುತೇಕ ಹೋಟೆಲ್‌ನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಜನರನ್ನು ಮನರಂಜಿಸಲಾಯಿತು.
ಕತ್ತಲಿನಲ್ಲಿ ಕಳೆಗಟ್ಟಿದ್ದ ಪಾರ್ಟಿಗಳು:
ನಗರ ಹಾಗೂ ಹೊರ ವಲಯದಲ್ಲಿರುವ ಮಧ್ಯಮ ಪ್ರಮಾಣದ ಹೋಟೆಲ್, ರೆಸಾರ್ಟ್, ಕ್ಲಬ್, ಪಬ್‌ಗಳು ಅಲಂಕಾರಗೊಂಡು ಗ್ರಾಹಕರನ್ನು ಸ್ವಾಗತಿಸಿದ್ದವು. ಹೊಸ ವರ್ಷಕ್ಕಾಗಿ ನೃತ್ಯ, ಗಾಯನ ಸೇರಿದಂತೆ ಸಾಂಸ್ಕೃತಿಕ ಹಾಗೂ ಮನೋರಂಜನೆ ಕಾರ್ಯಕ್ರಮ ಆಯೋಜಿಸಿದ್ದರಿಂದ ನ್ಯೂ ಇಯರ್ ಪಾರ್ಟಿಗಳು ಕತ್ತಲಿನಲ್ಲಿ ಕಳೆಗಟ್ಟಿತ್ತು. ಕುಟುಂಬದವರೊಂದಿಗೆ ಹೊಸ ವರ್ಷಾಚರಣೆ ಮಾಡಲು ಇಲ್ಲಿಗೆ ಜನರು ಬಂದಿದ್ದು, ತಿಂಡಿ-ತಿನಿಸು, ಪಾನೀಯಗಳನ್ನು ಒಳಗೊಂಡ ಪ್ಯಾಕೇಜ್ ಮೂಲಕ ಹೋಟೆಲ್‌ಗಳು ಆತಿಥ್ಯ ನೀಡಿದವು. ಇಲ್ಲಿ ನಡೆದ ನೃತ್ಯ, ಸಂಗೀತ ಅಲೆಯಲ್ಲಿ ಗ್ರಾಹಕರು ಕಳೆದುಹೋದರು.
ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಕೇಕ್ ಕತ್ತರಿಸಿ ಸಂಭ್ರಮಿಸುವುದು ಸಂಪ್ರದಾಯ. ಅದೇ ರೀತಿ ನಗರದ ಹೋಟೆಲ್, ರೆಸಾರ್ಟ್, ಬಡಾವಣೆಯ ಪ್ರಮುಖ ಸ್ಥಳಗಳಲ್ಲಿ ಯುವಕರು ಕೇಕ್ ಕತ್ತರಿಸಿ ಸಂತಸ ವಿನಿಮಯ ಮಾಡಿಕೊಂಡರು. ಇನ್ನೂ ಕೆಲವರು ತಮ್ಮ ಮನೆಗಳಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಿದರು. ರಾತ್ರಿ 12 ಸಮೀಪಿಸುತ್ತಿದ್ದಂತೆಯೇ ಜನರು ಪಟಾಕಿ ಸಿಡಿಸಿದರು. ಕೆಲ ಯುವಕರು ಗುಂಪು ಗುಂಪಾಗಿ ‘ಜಾಲಿ ರೈಡ್’ ಮಾಡಿ ಖುಷಿಪಟ್ಟರು. ಬೈಕ್‌ನಲ್ಲಿ ರೌಂಡ್ ಹೊಡೆಯುತ್ತಲೇ ರಸ್ತೆಯಲ್ಲಿ ಸಿಕ್ಕ ವ್ಯಕ್ತಿಯ ಪರಿಚಯವೇ ಇಲ್ಲದಿದ್ದರೂ ‘ಹ್ಯಾಪಿ ನ್ಯೂ ಇಯರ್’ ಹೇಳಿ ಸಾಗುತ್ತಿದ್ದ ಕಂಡು ಬಂತು.
ಬಿಗಿ ಪೊಲೀಸ್ ಬಂದೋಬಸ್ತ್:
ಅಹಿತಕರ ಘಟನೆ ತಡೆಯಲು ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಣ್ಗಾವಲು ಇಡಲಾಯಿತು. ನಗರದಲ್ಲಿ 59 ಸ್ಥಳ, ಹೊಸದಾಗಿ 275 ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಪೊಲೀಸ್ ಕಂಟ್ರೋಲ್ ರೂಂ ಮೂಲಕ ನಿಗಾ ವಹಿಸಲಾಯಿತು.
ಸಾರ್ವಜನಿಕರಿಗೆ ಶುಭ ಕೋರುವ ನೆಪದಲ್ಲಿ ಕೀಟಲೆ, ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ನಗರದಲ್ಲಿ 18 ವಿಶೇಷ ಕಾರ್ಯಪಡೆ ತಂಡ ರಸ್ತೆಗಿಳಿದಿತ್ತು. ಮಹಿಳೆಯರ ರಕ್ಷಣೆಗಾಗಿ 6 ವಿಶೇಷ ತಂಡ, 4 ಪಿಂಕ್ ಗರುಡ ತಂಡ ನಗರ ಗಸ್ತು ಹಾಕಿತು.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾ ವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ 5 ಸಂಚಾರಿ ಕ್ಷಿಪ್ರ ಕಾರ್ಯಪಡೆ ಆಯಕಟ್ಟಿನ ಜಾಗದಲ್ಲಿ ತಪಾಸಣೆ ಮಾಡಿತು. ವಾಹನಗಳನ್ನು ವ್ಹೀಲಿಂಗ್, ಡ್ರಾಗ್ ರೇಸ್, ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ 5 ಕ್ಷಿಪ್ರ ಕಾರ್ಯಪಡೆ ನಿಗಾ ವಹಿಸಿತ್ತು. ಶನಿವಾರ ರಾತ್ರಿಯಿಡೀ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು.
ಮದ್ಯದ ಹೊಳೆ, ಆದಾಯದ ಮಳೆ
ಶನಿವಾರ ರಾತ್ರಿವಿಡೀ ಪಾನಗೋಷ್ಠಿಯ ಸದ್ದು ಮಾರ್ದನಿಸಿತು. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಜಿಲ್ಲೆಯಲ್ಲಿ ಸುಮಾರು 35ರಿಂದ 40 ಸಾವಿರ ಲೀಟರ್ ಮದ್ಯ, 40 ಸಾವಿರ ಲೀಟರ್ ಬಿಯರ್ ಬಿಕರಿಯಾಗಿದೆ.
ಸಾಮಾನ್ಯ ದಿನಗಳಲ್ಲಿ 12ರಿಂದ 15 ಕೋಟಿ ರೂ. ಮೌಲ್ಯದ ವಿವಿಧ ಮದ್ಯ ಮಾರಾಟವಾಗುತ್ತದೆ. ವರ್ಷಾಚರಣೆಗೆ ಹಲವರು ಜನರು ಮದ್ಯಪಾನ ಮಾಡಿ ಸಂಭ್ರಮಿಸಲು ಬಯಸುವುದರಿಂದ ಸಾಮಾನ್ಯ ದಿನಗಳಿಗಿಂತ ಅಧಿಕ ಮದ್ಯ ಮಾರಾಟವಾಗಿದೆ.
ಜಿಲ್ಲೆಯಲ್ಲಿ ಲೈಸನ್ಸ್ ಹೊಂದಿರುವ 375 ಮದ್ಯ ಮಾರಾಟ ಕೇಂದ್ರಗಳಿವೆ. ಅದರೊಂದಿಗೆ 50ಕ್ಕೂ ಹೆಚ್ಚು ಎಂಎಸ್‌ಐಎಲ್ ಕೇಂದ್ರಗಳಿವೆ. ಈ ಎಲ್ಲ ಕೇಂದ್ರಗಳಲ್ಲೂ ಡಿ.30ರಿಂದಲೇ ಮದ್ಯ ಮಾರಾಟ ಬಿರುಸಾಗಿ ನಡೆದಿದ್ದು, ಶನಿವಾರ ಹೊತ್ತಿಗೆ 25 ಕೋಟಿ ರೂ. ಮೌಲ್ಯದ ಮದ್ಯ ವಹಿವಾಟಾಗಿದೆ ಎಂದು ಅಂದಾಜಿಸಲಾಗಿದೆ.
ಎಣ್ಣೆ ಪಾರ್ಟಿ ಮೈಸೂರು ನಗರ ವ್ಯಾಪ್ತಿಯಲ್ಲೇ ಭರ್ಜರಿಯಾಗಿ ನಡೆದಿದೆ. ಜಿಲ್ಲೆಯ ವಹಿವಾಟಿನಲ್ಲಿ ಶೇ.70ರಷ್ಟು ಮದ್ಯಮಾರಾಟ ನಗರ ಪ್ರದೇಶದಲ್ಲೇ ನಡೆದರೆ, ಶೇ.30ರಷ್ಟು ಎಲ್ಲ ತಾಲೂಕು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಆಗಿದೆ. ಕೆಲವರು ನಗರ ಪ್ರದೇಶದಿಂದ ಪಾರ್ಸೆಲ್ ತೆಗೆದುಕೊಂಡು ಹೋಗಿ ಗ್ರಾಮೀಣ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದಾರೆ.