ಸಂಭ್ರಮದ ಶ್ರೀ ಶನೈಶ್ಚರಸ್ವಾಮಿ ರಥೋತ್ಸವ

25HDK3
ಎಚ್.ಡಿ. ಕೋಟೆ ಪಟ್ಟಣದ ನಾಯಕರ ಬಡಾವಣೆಯಲ್ಲಿ ಶ್ರೀ ಶನೈಶ್ಚರಸ್ವಾಮಿ ರಥೋತ್ಸವ ಹಿನ್ನೆಲೆಯಲ್ಲಿ ದೇಗುಲಕ್ಕೆ ಆಗಮಿಸಿದ್ದ ಭಕ್ತರು.
Published on

ಎಚ್.ಡಿ. ಕೋಟೆ: ಪಟ್ಟಣದ ನಾಯಕರ ಬಡಾವಣೆಯಲ್ಲಿರುವ ಶ್ರೀರಾಮಂದಿರ ರಸ್ತೆಯಲ್ಲಿ ಶನಿವಾರ ಶ್ರೀ ಶನೈಶ್ಚರಸ್ವಾಮಿ ರಥೋತ್ಸವ ಹಾಗೂ ಪೂಜಾ ಕಾರ್ಯಕ್ರಮ ಶನಿವಾರ ಸಂಭ್ರಮದಿಂದ ನೆರವೇರಿತು.

ಉತ್ಸವದ ಅಂಗವಾಗಿ ದೇಗುಲವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಶನೈಶ್ಚರ ಸ್ವಾಮಿ ದೇಗುಲದಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ದೇಗುಲದ ಮುಖ್ಯ ಅರ್ಚಕ ಶ್ರೀಧರ್‌ಮೂರ್ತಿ ನೇತೃತ್ವದಲ್ಲಿ ಬೆಳಗ್ಗೆ ಅಭಿಷೇಕ, ಪುಣ್ಯಾಹ, ಗಣಪತಿ ಹೋಮ, ನವಗ್ರಹ ಹೋಮ, ದೇವರಿಗೆ ಅಭಿಷೇಕ, ಮಹಾಮಂಗಳಾರತಿ, ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆದವು. ಮಧ್ಯಾಹ್ನ ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.

ತಾಲೂಕಿನ ಸುತ್ತಮುತ್ತಲ ಹಳ್ಳಿಗಳಾದ ಹ್ಯಾಂಡ್‌ಪೋಸ್ಟ್, ಎಚ್.ಮಟಕೆರೆ, ಹೈರಿಗೆ, ಮೇಟಿಕುಪ್ಪೆ, ಹೆಬ್ಬಳ್ಳ, ಹೆಗ್ಗಡಾಪುರ, ಪಟ್ಟಣದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಬೀರಪ್ಪ ಸ್ವಾಮಿ, ಮಲೆ ಮಹದೇಶ್ವರಸ್ವಾಮಿ ಸೇರಿದಂತೆ ಇತರ ದೇವರ ಗುಡ್ಡಪ್ಪಗಳ ನೃತ್ಯವನ್ನು ಭಕ್ತರು ಕಣ್ತುಂಬಿಕೊಂಡರು.

ರಾತ್ರಿ ಶ್ರೀ ಶನೈಶ್ಚರ ಸ್ವಾಮಿ ರಥೋತ್ಸವ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಸಾಗಿತು. ದೇಗುಲದಿಂದ ಹೊರಟ ಮೆರವಣಿಗೆ ರಾಮಮಂದಿರ ರಸ್ತೆ ಮೂಲಕ ಹನುಮಂತನಗರ, ಒಂದನೇ ಮುಖ್ಯ ರಸ್ತೆ, ಎರಡನೇ ಮುಖ್ಯರಸ್ತೆಯಲ್ಲಿ ಸಾಗಿ ಕಾಳಿದಾಸ ರಸ್ತೆ ಮೂಲಕ ಮತ್ತೆ ದೇವಸ್ಥಾನದಲ್ಲಿ ಅಂತ್ಯಗೊಂಡಿತು. ಹರಕೆ ಹೊತ್ತ ಭಕ್ತರು ರಥವನ್ನು ಎಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net