ಸಂಭ್ರಮದ ಮಾರಿಕಾಂಬ, ಬಸವೇಶ್ವರ ಜಾತ್ರೆ

IMG_20230517_172853
Published on

ಹೊಳೆನರಸೀಪುರ: ತಾಲೂಕಿನ ಸಿ.ಹಿಂದಲಹಳ್ಳಿ ಗ್ರಾಮದಲ್ಲಿ ಶ್ರೀ ಮಾರಿಕಾಂಬ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಎರಡು ದಿನಗಳಿಂದ ವಿಜೃಂಭಣೆಯಿಂದ ಜರುಗಿತು.


ಮಂಗಳವಾರ ರಾತ್ರಿ ಗ್ರಾಮ ದೇವತೆಗೆ ಹೋಮ ಹವನ ನಡೆದವು. ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು. ರಂಗಕುಣಿತ, ಕೋಲಾಟ, ದೇವರನಾಮಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ನಡೆಯಿತು. ನಾನಾ ಬಗೆಯ ಹೂವುಗಳಿಂದ ದೇವರನ್ನು ಸಿಂಗರಿಸಲಾಗಿತ್ತು. ಹೆಣ್ಣು ಮಕ್ಕಳು ಕಳಸ ಹೊತ್ತು ಉತ್ಸವದಲ್ಲಿ ಸಾಗಿದರು. ಗ್ರಾಮದ ಏಳಿಗೆಗೆ ಜನ-ಜಾನುವಾರುಗಳಿಗೆ ಗ್ರಾಮ ದೇವತೆ ಮಾರಿಕಾಂಬ, ಬಸವೇಶ್ವರ ಅನುಗ್ರಹವಿದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ದೇವರ ದರ್ಶನ ಪಡೆದು ಗ್ರಾಮಸ್ಥರು ಪುನೀತರಾಗುತ್ತಾರೆ. ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನರು ದೇವರ ದರ್ಶನ ಪಡೆದರು.


ಹಬ್ಬದ ಪ್ರಯುಕ್ತ ಗ್ರಾಮವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಪಂ ಸದಸ್ಯ ಶೇಖರ್, ನಿವೃತ್ತ ಶಿಕ್ಷಕ ರಾಮಕೃಷ್ಣ, ಮುಖಂಡರಾದ ರಾಜೇಗೌಡ, ಅಣ್ಣೇಗೌಡ, ನವೀನ, ಬಸವರಾಜು, ಶಿವಕುಮಾರ, ಮಲ್ಲೇಶ, ಕುಮಾರ, ಹೇಮ, ಬೋಜೇಗೌಡ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net