

ಹಾಸನ : ಬೇಲೂರು ಗ್ರಾಮ ದೇವತೆ ಶ್ರೀ ದೊಡ್ಡಮ್ಮ ಚಿಕ್ಕಮ್ಮನವರ ಕೊಂಡೋತ್ಸವ ಹಾಗೂ ಜಾತ್ರಾ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಡಾ.ಅಂಬೇಡ್ಕರ್ ನಗರದ ಕಟ್ಟೆ ಮಾರಮ್ಮ ದೇಗುಲ ಆವರಣದಲ್ಲಿ ನೆರವೇರಿತು.
ದೊಡ್ಡಮ್ಮ ಚಿಕ್ಕಮ್ಮನವರ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ಅಂಗವಾಗಿ ಸೋಮವಾರದಿಂದಲೇ ದೇವಸ್ಥಾನವನ್ನು ತಳಿರು, ತೋರಣ, ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅರ್ಚಕ ಮಂಜುನಾಥ್ ಮತ್ತು ತಂಡ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿತು.
ಮಂಗಳವಾರ ಬೆಳಗ್ಗೆ ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವರನ್ನು ಪಟ್ಟಣ ಸಮೀಪದ ವಿಷ್ಣು ಸಮುದ್ರ ಕೆರೆಯ ಕಲ್ಯಾಣಿಗೆ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ದು ಗಂಗಾ ಪೂಜೆ ನೆರವೇರಿಸಲಾಯಿತು. ಕಲ್ಯಾಣಿ ಆವರಣದಿಂದ ವಿಶೇಷ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಮೂಲಕ ಕೆಂಪೇಗೌಡ ವೃತ್ತ, ಅಂಬೇಡ್ಕರ್‌ನಗರದ ದೇಗುಲ ಆವರಣಕ್ಕೆ ಕರೆತರಲಾಯಿತು. ಜಾತ್ರಾ ಮಹೋತ್ಸವ ಅಂಗವಾಗಿ ಕಟ್ಟೆ ಮಾರಮ್ಮ ದೇಗುಲದ ಮುಂಭಾಗ ಹಾಕಿದ್ದ ಕೊಂಡವನ್ನು ನೂರಾರು ಭಕ್ತರ ಸಮ್ಮುಖದಲ್ಲಿ ಕಳಸ ಹೊತ್ತವರು ಮೊದಲು ಹಾಯ್ದರು. ನಂತರ ದೇವರನ್ನು ಹೊತ್ತವರು, ಭಕ್ತರು ಕೊಂಡ ಹಾಯ್ದರು. ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇಗುಲ ಸಮಿತಿ ಮುಖಂಡರಾದ ಚಂದ್ರಯ್ಯ, ಜಗದೀಶ್, ಲಕ್ಷ್ಮಣ್, ಕುಮಾರಸ್ವಾಮಿ, ರಾಮು, ಚನ್ನಕೇಶವ, ಸತೀಶ್, ರಮೇಶ್, ಉಮೇಶ್, ಮಹೇಶ, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.