ಸಂಭ್ರಮದ ಕ್ರಿಸ್‌ಮಸ್ ಆಚರಣೆ

sr.jpg
Published on

ದಾವಣಗೆರೆ: ಯೇಸು ಕ್ರಿಸ್ತನ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ನಗರದಲ್ಲಿ ಕ್ರೈಸ್ತರು ಭಾನುವಾರ ಸಡಗರದಿಂದ ಆಚರಿಸಿದರು. ಮನೆಗಳಲ್ಲಿಯೂ ಪುಟ್ಟ ಗೋದಲಿ ನಿರ್ಮಿಸಿ ದೀಪಗಳ ಅಲಂಕಾರ ಮಾಡುವ ಮೂಲಕ ಸಂಭ್ರಮಿಸಿದರು.

ನಗರದ ಸೇಂಟ್ ಥಾಮಸ್ ಚರ್ಚ್ ವಿದ್ಯುತ್ ದೀಪಾಲಂಕಾರದೊಂದಿಗೆ ಝಗಮಗಿಸಿತು. ಶನಿವಾರ ತಡರಾತ್ರಿ ಯೇಸುಕ್ರಿಸ್ತನ ಜನನದ ವಿಶೇಷ ಗೋದಲಿ ಪೂಜೆ ನೆರವೇರುವುದರೊಂದಿಗೆ ಹಬ್ಬ ಕಳೆಗಟ್ಟಿತು. ಸೇಂಟ್ ಥಾಮಸ್ ಚರ್ಚ್‌ನ ಫಾದರ್ ಆಂಥೋನಿ ನಜರತ್ ಅವರು ಬಾಲಯೇಸುವನ್ನು ಗೋದಲಿಗೆ ಹಾಕಿದರು.

ಕರೊನಾದಿಂದ ಮುಕ್ತಿ ಸಿಗಲೆಂದು ಆಶಿಸಿ ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನೆರವೇರಿತು. ನಂತರ ಕೇಕ್ ವಿತರಿಸಲಾಯಿತು. ಚರ್ಚ್‌ನ ಹಿಂಬದಿಯಲ್ಲಿ ನಿರ್ಮಿಸಲಾದ ಗೋದಲಿಯ ವೀಕ್ಷಣೆಗೆ ಭಾನುವಾರದಂದು ಜನಜಂಗುಳಿ ಹೆಚ್ಚಿತ್ತು. ಇತರೆ ಸಮಾಜದವರೂ ನೆರೆದಿದ್ದರು. ಜನರು ಮಾತೆ ಮರಿಯಮ್ಮನ ಗವಿ ಬಳಿ ಮೇಣದಬತ್ತಿ ಬೆಳಗಿ ನಿವೇದಿಸಿಕೊಂಡರು.

ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಕೇಕ್ ಮಾರಾಟದ ಪ್ರಮಾಣ ಹೆಚ್ಚಿತ್ತು. ಸಾಂತಾ ಕ್ಲಾಸ್ ಟೋಪಿ, ಮೇಣದಬತ್ತಿ, ಬಲೂನ್ ಖರೀದಿಗೆ ಭರಾಟೆ ಕಂಡುಬಂದಿತು. ಸಂಜೆ ಚರ್ಚ್ ಸುತ್ತಲಿನ ರಸ್ತೆಗಳಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net