ಸಂಭ್ರಮದ ಕ್ರಿಸ್‌ಮಸ್ ಆಚರಣೆ

25 Raju 5
ಚಾಮರಾಜನಗರದ ಸತ್ಯಮಂಗಲ ರಸ್ತ್ತೆಯಲ್ಲಿರುವ ಸಿಎಸ್‌ಐ ಚರ್ಚ್‌ನಲ್ಲಿ ಭಾನುವಾರ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು.
Published on

ಚಾಮರಾಜನಗರ: ಜಿಲ್ಲೆಯ ಎಲ್ಲೆಡೆ ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.

ಜಿಲ್ಲಾ ಕೇಂದ್ರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರಿನಲ್ಲಿ ಕ್ರಿಸ್‌ಮಸ್ ಪ್ರಯುಕ್ತ ಕ್ರಿಶ್ಚಿಯನ್ನರು ಬೆಳಗ್ಗೆ ಚರ್ಚ್‌ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಗೋದಲಿ ನಿರ್ಮಿಸಿ, ಕೇಕ್ ಕತ್ತರಿಸಿ ಹಬ್ಬ ಆಚರಿಸಿದರು.

ಜನರು ಹೊಸ ಉಡುಗೆಗಳನ್ನು ತೊಟ್ಟು ಚರ್ಚ್‌ಗಳಿಗೆ ತೆರಳಿ ಾದರ್ ಸಮ್ಮುಖದಲ್ಲಿ ಡಿ.24ರ ಮಧ್ಯರಾತ್ರಿ ದಿವ್ಯ ಬಲಿಪೂಜೆ ನೆರವೇರಿಸಿ, ಏಸುಕ್ರಿಸ್ತನ ನಾಮಸ್ಮರಣೆ ಮಾಡಿದರು. ಅಕ್ಕ-ಪಕ್ಕದ ಮನೆಯವರು, ಸಂಬಂಧಿಕರು, ಪರಿಚಯಸ್ಥರಿಗೆ ಕೇಕ್ ಹಾಗೂ ಸಿಹಿ ವಿತರಿಸಿದರು. ತಮ್ಮ ಮನೆಗಳಲ್ಲಿ ವಿಶೇಷ ಭೋಜನ ವ್ಯವಸ್ಥೆ ಏರ್ಪಡಿಸಿದ್ದರು.

ನಗರದ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ಚರ್ಚ್, ಸತ್ಯಮಂಗಲ ರಸ್ತ್ತೆಯಲ್ಲಿರುವ ಸಿಎಸ್‌ಐ ಚರ್ಚ್, ತಾಲೂಕಿನ ನಾಗವಳ್ಳಿ ಚರ್ಚ್, ದೊಡ್ಡರಾಯಪೇಟೆ, ಕೆಲ್ಲಂಬಳ್ಳಿ, ಕೋಡಿಉಗನೆ, ಬಿಸಲವಾಡಿಗಳಲ್ಲಿರುವ ಚರ್ಚ್‌ಗಳು ಹಾಗೂ ಮಸಗಾಪುರ, ಮಾದಾಪುರ, ಭೋಗಾಪುರಗಳಲ್ಲಿರುವ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಅಲ್ಲದೇ ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‌ಗಳಲ್ಲಿ ಸಿಂಗರಿಸಲ್ಪಟ್ಟಿದ್ದ ಬಾಲ ಯೇಸು, ಕ್ರಿಸ್‌ಮಸ್ ಮರಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net