

ಕಕ್ಕೇರಿ, ಬೆಳಗಾವಿ: ದಸರಾ 9ನೇ ದಿನದ ವಿಜಯದಶಮಿ ಪ್ರಯುಕ್ತ ಕಕ್ಕೇರಿಯ ಶ್ರೀ ಬಿಷ್ಟಾದೇವಿ ಹಾಗೂ ಸಹೋದರಿ ಮೂಕಮ್ಮದೇವಿಯ ಭವ್ಯ ಜಾತ್ರೆಗೆ ಅದ್ದೂರಿಯಾಗಿ ಮಂಗಳವಾರ ಚಾಲನೆ ನೀಡಲಾಯಿತು. ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರ, ಗೋವಾದಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.
ದೇವಿಯ ಉಡಿ ತುಂಬುವ ಕಾರ್ಯಕ್ರಮ ಮಂಗಳವಾರ ಸಂಜೆ 7 ರಿಂದ ರಾತ್ರಿ 3 ವರೆಗೆ ಹಾಗೂ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮ ಬುಧವಾರ ಬೆಳಗ್ಗೆ 4 ರಿಂದ ಸೂರ್ಯೋದಯದವರೆಗೆ ನೆರವೇರಿತು. ಮಂಗಳವಾರ ಸಂಜೆ ದೇವಸ್ಥಾನದ ವಂಶಸ್ಥರಾದ ಕೌಜಲಗಿ ದೇಸಾಯಿ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಕಾರ್ತಿಕ ಅಂಬೋಜಿ, ಮೊದಲು ಉಡಿ ತುಂಬುವ ಮೂಲಕ ಜಾತ್ರೆ ವಿದ್ಯುಕ್ತವಾಗಿ ಪ್ರಾರಂಭಗೊಂಡಿತು. ಒಂದು ವಾರಗಳ ಕಾಲ ಜಾತ್ರೆ ಜರುಗಲಿದೆ.
ಭಕ್ತರು ಬಂಗಾರ, ಬೆಳ್ಳಿ, ಹಣ, ಸೀರೆ, ಕುಪ್ಪಸ, ತೆಂಗಿನಕಾಯಿ, ಹಣ್ಣು ದೇವರಿಗೆ ಅರ್ಪಿಸಿದರು. ಇದಕ್ಕೂ ಮೊದಲು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಮಾತನಾಡಿ, ಪ್ರಾಣಿ ಬಲಿ ಮತ್ತಿತರ ಕಂದಾಚಾರಗಳನ್ನು ಆಚರಣೆ ಮಾಡದಂತೆ ಮನವಿ ಮಾಡಿದರು. ತಹಸೀಲ್ದಾರ್ ಪ್ರವೀಣ ಜೈನ್, ಎಸ್‌ಪಿ ಸಂಜೀವ ಪಾಟೀಲ, ಡಿವೈಎಸ್ಪಿ ಶಿವಾನಂದ ಕಟಗಿ, ನಂದಗಡ ಠಾಣೆಯ ಸಿಪಿಐ ಎಸ್.ಬಿ. ಮಾಳಗೊಂಡ. ಪಿಎಸ್‌ಐ ರಾಧಾ ಸಪಾಟೆ ಹಾಗೂ 300ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಒದಗಿಸಿದ್ದರು. ಪ್ರಾಣಿಬಲಿ ರಹಿತ ಜಾತ್ರೆ ಯಶಸ್ವಿಗೊಂಡಿತು. ದೇವಸ್ಥಾನದ ಎದುರು ಹಾಕಿದ ಚಪ್ಪರದಲ್ಲಿ ಕೋಳಿ ಹಾರಿಸಲು ಭಕ್ತರು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.