ಸಂಭ್ರಮದ ಎಳ್ಳು ಅಮವಾಸ್ಸೆ

1641121835445
Published on

ವಿಜಯಪುರ: ಎಳ್ಳು ಅಮವಾಸೆ ಪ್ರಯುಕ್ತ ಇಂದು ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಶಿವಾನಂದ ಗಂಗನಗೌಡ್ರ ಹೊಲದಲ್ಲಿ ಚರಗ ಚಲ್ಲುವ ಸಂಭ್ರಮದ ಹಬ್ಬ ಆಚರಣೆ ಮಾಡಲಾಯಿತು. ಈ ವೇಳೆ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ತರ ಕರ್ನಾಟಕದಲ್ಲಿ ಎಳ್ಳು ಅಮವಾಸೆ ವಿಶಿಷ್ಟ ಸಾಂಪ್ರದಾಯಿಕ ಹಬ್ಬವಾಗಿದೆ. ಹಿಂಗಾರಿ ಬೆಳೆ ಇನ್ನೇನು ರೈತರ ಕೈ ಸೇರೋ ಸಮಯವಾಗಿದ್ದು, ಜೋಳ, ಗೋಧಿ ಕಟಾವಿಗೆ ಬರುವಂತ ಸಮಯದ ಈ ಹಬ್ಬವನ್ನು ಉತ್ತರ ಕರ್ನಾಟಕದ ಜನ್ರು ಸಂಭ್ರಮದಿಂದ ಆಚರಿಸುತ್ತಾರೆ. ಆದ್ರೆ ಸತತ ಬರಗಾಲದಿಂದ ಬೆಂದ ರೈತರು ತಮ್ಮ ಸಂಕಷ್ಟದ ಮದ್ಯೆಯೂ ಹಬ್ಬವನ್ನು ಆಚರಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮನ್ನು ಸಲುಹಿದ ಭೂತಾಯಿ ತಮ್ಮನ್ನೆಂದೂ ಕೈಬಿಡೋದಿಲ್ಲ ಅನ್ನೋದು ರೈತರ ನಂಬಿಕೆ. ಹೀಗಾಗಿ ಹಬ್ಬದ ಮೂಲಕ ಭೂಮಿ ತಾಯಿಯನ್ನು ಪೂಜಿಸಿ, ಚರಗ ಚಲ್ಲೋ ಮೂಲಕ ಭೂಮಾತೆಗೆ ಕೃತಜ್ಞತೆ ಸಲ್ಲಿಸಿದ್ರು. ಇನ್ನು ವಿವಿಧ ಬಗೆಯ ಸೊಪ್ಪು, ಕಾಳುಗಳು, ಪಲ್ಯೆ, ಚಟ್ನಿ, ರೊಟ್ಟಿ ತಯಾರಿಸಿ ಮನೆಮಂದಿಯಲ್ಲ ತಮ್ಮ ಜಮೀನಿನಲ್ಲೆಲ್ಲ ಸಹಭೋಜನ ಮಾಡಿ ಸಂಭ್ರಮಿಸಿದ್ರು.

ಎಳ್ಳ ಅಮವಾಸೆಗೊಂದು ವಿಶಿಷ್ಟ ಹಿನ್ನೆಲೆ ಇದ್ದು, ಫಸಲು ನೀಡುವ ಭೂಮಿ ತಾಯಿಗೆ ಮಾಗಿ ಚಳಿಯ ಈ ಸಮಯ ಗರ್ಭವತಿಯಾಗೋ ಸಮಯವಂತೆ. ಹೀಗಾಗಿ ಭೂ ತಾಯಿಗೆ ಸೀಮಂತ ಮಾಡೋ ಆಚರಣೆಯೇ ಎಳ್ಳು ಅಮವಾಸೆ ಅಂತ ಕೆಲವರು ಹೇಳ್ತಾರೆ. ಇನ್ನು ಕೆಲವರು ರೈತರು ಬೆಳೆದ ತರಕಾರಿ ಹಾಗೂ ಸೊಪ್ಪು ಸೂಸೋ ಸಮಯದಲ್ಲಿ ಮೊದಲು ಸೂಸಿದ ಸೊಪ್ಪಿನಿಂದ ಪೂಜೆ ಮಾಡೋದು ಎಳ್ಳು ಅಮವಾಸೆ ವಿಶೇಷ ಅಂತ ಕೆಲವ್ರು ಹೇಳ್ತಾರೆ. ಭೂಮಿ ಮತ್ತು ರೈತನ ಸಂಬಂಧ ಮೀನು ಮತ್ತು ನೀರಿನಂತೆ. ಹೀಗಾಗಿ ವರ್ಷಪೂರ್ತಿ ಅನ್ನ ನೀಡೋ ಭೂಮಿಯನ್ನು ಎಳ್ಳು ಅಮವಾಸೆ ನೆಪದಲ್ಲಿ ಸಿಂಗರಿಸಿ ಪೂಜಿಸೋದು ವಿಶೇಷವಾಗಿದೆ. ಇನ್ನು ಎಳ್ಳು ಅಮವಾಸೆ ವೇಳೆಯಲ್ಲಿ ಬರೋ ಮಾಗಿ ಚಳಿಗೆ ಹೊಂದಿಕೆಯಾಗುವಂತಹ ಆಹಾರ ಸಿದ್ಧಪಡಿಸೋದು ಕೂಡ ಈ ಹಬ್ಬದ ವಿಶೇಷ. ಆದ್ರೆ ಹಲವು ವರ್ಷದಿಂದ ಬರದ ಬವಣೆಯಲ್ಲಿ ಬಳಲುತ್ತಿರೋ ರೈತರು ಹೊಸ ನಿರೀಕ್ಷೆಯೊಂದಿಗೆ ಕೈಲಾದಷ್ಟು ಪ್ರಮಾಣದಲ್ಲಿ ಹಬ್ಬವನ್ನು ಆಷರಿಸಿರೋದು ವಿಶೇಷವಾಗಿತ್ತು. ಸಂಭ್ರಮದ ಆಚರಣೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಿರಿಯರೆಲ್ಲ ಎತ್ತಿನ ಬಂಡಿ ಕಟ್ಟಿಕೊಂಡು ಬಂದು ಪಾಲ್ಗೊಂಡಿದ್ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net