ಸಂಭ್ರಮದ ಉಳವಿ ಚನ್ನಬಸವೇಶ್ವರ ಮಹಾರಥೋತ್ಸವ

10 joida 01,
Published on

ಜೊಯಿಡಾ: ಹರ…ಹರ……ಮಹಾದೇವ ….ಶ್ರೀ ಚನ್ನಬಸವೇಶ್ವರ ಮಹಾರಾಜ ಕೀ ಜೈ… ಎನ್ನುತ್ತಾ ಲಕ್ಷಾಂತರ ಭಕ್ತರು ಶ್ರೀ ಚನ್ನಬಸವೇಶ್ವರ ಮಹಾರಥೋತ್ಸವವನ್ನು ಸಂಭ್ರಮದಿಂದ ಎಳೆದರು.

ದೇವಸ್ಥಾನದ ರಥಬೀದಿಯಲ್ಲಿ ರಥ ಎಳೆಯುವ ವೇಳೆ ಹರ ಹರ ಮಹಾದೇವ ಎಂಬ ಶಿವ ಭಕ್ತರ ಜಯಘೊಷ ಮುಗಿಲುಮುಟ್ಟಿತ್ತು. ರಥಕ್ಕೆ ಬಾಳೆಹಣ್ಣು,ಉತ್ತತ್ತಿ, ಮೋಸಂಬಿಗಳನ್ನು ಎಸೆದು ಕೃತಾರ್ಥರಾದರು.

ಶಾಸಕ ಆರ್.ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ, ಉಳವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ, ಉಪಾಧ್ಯಕ್ಷ ಸಂಜಯ ಕಿತ್ತೂರ, ಸದಸ್ಯರಾದ ಬಿ.ಸಿ. ಉಮಾಪತಿ, ಜಿ.ಪಂ. ಸದಸ್ಯ ರಮೇಶ ನಾಯ್ಕ, ತಹಸೀಲ್ದಾರ್ ಸಂಜಯ ಕಾಂಬ್ಳೆ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮೊಕಾಶಿ, ಉಪಾಧ್ಯಕ್ಷೆ ಲಲಿತಾ ದಾತೋಡಕರ ಮಹಾರಥಕ್ಕೆ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ದಾಸೋಹ ಸೇವೆ : ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಗೆ ಬರುವ ಭಕ್ತರಿಗೆ ಅನ್ನದಾಸೋಹ ಉಳವಿ ಶ್ರೀ ಚನ್ನಬಸವೇಶ್ವರ ಕಮಿಟಿಯಿಂದ ನೀಡಲಾಯಿತು. ಜೊತೆಗೆ ಉಳವಿಯ ವಿವಿಧ ಭಾಗಗಳಲ್ಲಿ ದಾನಿಗಳಿಂದ 15-20 ದಾಸೋಹ ಸೇವೆಗಳು ನಡೆಯುತ್ತಿವೆ. ಜೊತೆಗೆ ಹೆಣಕೊಳ, ಪೊಟೊಲಿ ಸಮೀಪದ ಕಾಂಡಾಕುಂಡಿ, ಚಾಪೇರ ಹತ್ತಿರ ಜೊತೆಗೆ ಶಿವಪುರ ಮತ್ತು ಯಲ್ಲಾಪುರದ ಗಣೇಶಗುಡಿಯಲ್ಲಿಯೂ ಭಕ್ತರು ಜಾತ್ರೆಯ ಸಮಯದಲ್ಲಿ ಯಾತ್ರಾರ್ಥಿಗಳಿಗೆ ದಾಸೋಹ ವ್ಯವಸ್ಥೆ ಕಲ್ಪಿಸಿದ್ದರು. ದಾಂಡೇಲಿ ಡಿವೈಎಸ್​ಪಿ, ಎಸ್.ಪಿ. ಮೋಹನ ಪ್ರಸಾದ, ಸಿಪಿಐ ಬಾಬಾ ಸಾಹೇಬ ಹುಳ್ಳಣ್ಣವರ ನೇತೃತ್ವದಲ್ಲಿ್ಲ 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಕಲ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net