

ಬಳ್ಳಾರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಹೆಚ್ಚಿನ ಮಳೆಯಿಂದ ವಿವಿಧೆಡೆ ಸಂಭಾವ್ಯ ಹಾನಿಯಾಗಿದ್ದು, ತ್ವರಿತವಾಗಿ ಪರಿಹಾರ ಒದಗಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಎಡಿಸಿ ಮಹಮ್ಮದ್ ಝುಬೇರ್ ಸೂಚಿಸಿದರು.
ನಗರದ ನೂತನ ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಮಳೆಹಾನಿ ಸಂಬಂಧಿಸಿದಂತೆ, ಜಿಲ್ಲೆಯ ತಾಲೂಕು ತಹಶೀಲ್ದಾರರೊಂದಿಗೆ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಮಾತನಾಡಿದರು.
ಅತಿವೃಷ್ಠಿಯಿಂದ ಸಂಭವಿಸುವ ಸಾರ್ವಜನಿಕ ಆಸ್ತಿ, ಮಾನವ, ಜಾನುವಾರು ಜೀವ, ಬೆಳೆ ಹಾಗೂ ಮನೆಗಳ ಹಾನಿ ಬಗ್ಗೆ ಗ್ರಾಮ ಲೆಕ್ಕಿಗರಿಂದ ವರದಿ ಪಡೆದು, ತಾಲೂಕುವಾರು ಕ್ರೋಢೀಕರಿಸಿ ನಿಗಧಿತ ನಮೂನೆಯಲ್ಲಿ ಈ ಕಚೇರಿಗೆ ತಪ್ಪದೇ ವರದಿ ಸಲ್ಲಿಸಿ ಎಂದು ತಹಶೀಲ್ದಾರರಿಗೆ ನಿರ್ದೆಶಿಸಿದರು. ಜಿಲ್ಲೆಯಲ್ಲಿ 57 ಮನೆಗಳು ಭಾಗಶಃ ಮತ್ತು 4 ಗುಡಿಸಲು ಮನೆಗಳು ಹಾನಿಯಾಗಿವೆ. ಮಳೆಗಾಲದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಉಂಟಾಗಬಹುದಾದ ನ್ಯೂನತಾ ಅಂಶಗಳನ್ನು ಗಮನದಲ್ಲಿರಿಸಿ ವಿದ್ಯುತ್ ಮೂಲ ಸೌಕರ್ಯಗಳನ್ನು ಬಲಪಡಿಸಬೇಕು. ವಿವಿಧ ಗ್ರಾ.ಪಂ ವಾರು ಕುಡಿಯಲು ಯೋಗ್ಯವಾದ ನೀರನ್ನೇ ಸರಬರಾಜು ಮಾಡಬೇಕು. ಈ ಕುರಿತು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕಂಪ್ಲಿ ಮತ್ತು ಸಿರುಗುಪ್ಪ ಭಾಗದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳ ಸುರಕ್ಷಿತ ಆಶ್ರಯ ತಾಣಗಳನ್ನು ಗುರುತಿಸಬೇಕು. ಜಾನುವಾರುಗಳಿಗೆ ಅವಶ್ಯ ಮೇವನ್ನು ದಾಸ್ತಾನು ಮಾಡಬೇಕು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪಡೆ, ತರಬೇತಿ ಪಡೆದ ಸಮುದಾಯ ಮಟ್ಟದ ಸ್ವಯಂ ಸೇವಕರನ್ನು ಜಾಗೃತಿಗೊಳಿಸಿ ಸನ್ನದ್ಧ ಸ್ಥಿತಿಯಲ್ಲಿಡುವುದು ಮತ್ತು ಇಲಾಖೆಯಲ್ಲಿ ಲಭ್ಯವಿರುವ ರಕ್ಷಣಾ ಸಲಕರಣೆ ಮಾಹಿತಿ ಕ್ರೂಡೀಕರಿಸಿಟ್ಟುಕೊಳ್ಳಬೇಕು ಎಂದರು. ಆಯಾ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎದುರಾಗಬಹುದು ಹಾನಿಯನ್ನು ಕೂಡಲೇ ಪರಿಹರಿಸುವ ಕ್ರಮ ಜರುಗಿಸಬೇಕು ಎಂದು ಹೇಳಿದರು.