

ಚಿತ್ರದುರ್ಗ: ಸದ್ಯದಲ್ಲೇ ಆರಂಭವಾಗಲಿರುವ ಮುಂಗಾರಿನ ಸಂದರ್ಭ ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪಗಳ ನಿಯಂತ್ರಣಕ್ಕೆ ಸೂ ಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಜ್ಜಾಗುವಂತೆ ಡಿಸಿ ಟಿ.ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ವಾಡಿಕೆ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೆ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಬೇಕಿದೆ. ಇದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕಂದಾಯ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಣ್ಣ ಮತ್ತು ಭಾರಿ ನೀರಾವರಿ ಸಹಿತ ವಿವಿಧ ಇಲಾಖೆ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಸಂಭಾವ್ಯ ಅವಘಡಗಳ ನಿಯಂತ್ರಣಕ್ಕೆ ಸಿದ್ಧರಾಗಿರಬೇಕು. ಮಳೆ ನೀರು ಸಮರ್ಪಕವಾಗಿ ಹರಿದುಹೋಗದೆ ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತವಾಗುವ, ಜನ-ಜಾನುವಾರು ಪ್ರಾಣಹಾನಿ ಆಗಬಹುದಾದ ಸಾಧ್ಯತೆ ಇದೆ. ಚರಂಡಿಗಳಲ್ಲಿರುವ ಕಸ ತೆರವುಗೊಳಿಸಿ, ಮಳೆ ನೀರು ಸರಾಗ ಹರಿವಿಗೆ ಕ್ರಮ ವಹಿಸಬೇಕೆಂದು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ 2 ಹಾಗೂ ತಾಲೂಕು ಕೇಂದ್ರಗಳಲ್ಲಿ ತಲಾ ಒಂದು ಸಹಾಯವಾಣಿ ಕೇಂದ್ರ ಆರಂಭಿಸಬೇಕು. ದಿನದ 24 ಗಂಟೆ ಈ ಕೇಂದ್ರಗಳು ಕಾರ್ಯನಿರ್ವಹಿಸಬೇಕು. ಅಗತ್ಯವಿದ್ದಲ್ಲಿ ಅವಘಡ ಸಂಭವಿಸಿದ ತಾಲೂಕುಗಳಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರ ತೆರೆಯಲು ಹಾಗೂ ಕಾಳಜಿ ಕೇಂದ್ರಗಳ ಸ್ಥಾಪನೆ,ಅಗತ್ಯ ವೈದ್ಯಕೀಯ ಸೌಲಭ್ಯದೊಂದಿಗೆ ಸಂತ್ರಸ್ತರಿಗೆ ಊಟೋಪಹಾರ, ಆರ್ಥಿಕ ನೆರವು, ಪಡಿತರ ವಿತರಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದರು.
ವಿದ್ಯುತ್ ಸಂಪರ್ಕ ನಿರಂತರವಾಗಿರುವಂತೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿ ಗಳಿಗೆ ಸೂಚಿಸಿದರು.
ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಸಕಾಲದಲ್ಲಿ ರಸಗೊಬ್ಬರ ಪೂರೈಸಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಮತ್ತಿತರರು ಇದ್ದರು.