ಸಂಭಾವ್ಯ ನೆರೆ ಎದುರಿಸಲು ಸನ್ನದ್ಧರಾಗಿ

25Huk1
Published on

ಹುಕ್ಕೇರಿ: ನಿರಂತರ ಸುರಿಯುತ್ತಿರುವ ಮಳೆಯಿಂದ ಹಳ್ಳ, ಕೊಳ್ಳ ಮತ್ತು ನದಿಗಳು ತುಂಬಿ ಹರಿಯುತ್ತಿವೆ. ಯಾವುದೇ ಸಂದರ್ಭದಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಅನಾಹುತ ಸಂಭವಿಸಿದಲ್ಲಿ ಅಧಿಕಾರಿಗಳು ತಕ್ಷಣ ತಾಲೂಕಾಡಳಿತಕ್ಕೆ ತಿಳಿಸುವ ಜತೆಗೆ ಸಂತ್ರಸ್ಥರ ನೆರವಿಗೆ ಧಾವಿಸಬೇಕೆಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯ್ಕ ಹೇಳಿದರು.

ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರವಾಹ ನಿರ್ವಹಣೆ ಸಭೆಯಲ್ಲಿ ಮಾತನಾಡಿ, ಪ್ರವಾಹ ಸಮಯದಲ್ಲಿ ಪಿಡಿಒಗಳು ಮತ್ತು ನೋಡಲ್ ಅಧಿಕಾರಿಗಳು ದೂರವಾಣಿ ಬಂದ್ ಇಡಬಾರದು. ಹಿಂದಿನ ವರ್ಷಗಳಲ್ಲಿ ಸಂಭವಿಸಿದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು. ಶಿಥಿಲಾವಸ್ಥೆಯ ಮನೆಗಳಲ್ಲಿ ವಾಸಿಸುವವರಿಗೆ ತಿಳಿವಳಿಕೆ ಹೇಳಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು. ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಬೇಕು. ಕುಡಿಯಲು ಶುದ್ಧ ನೀರು ಒದಗಿಸಲು ಗಮನ ಹರಿಸಬೇಕು ಎಂದರು.

ಜೋರಾದ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಯಿದೆ. ಜತೆಗೆ ವಿದ್ಯುತ್ ತಂತಿ ಹರಿದು ಜನರ ಜೀವಕ್ಕೆ ಅಪಾಯವಾಗಬಹುದು. ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕು. ಮಳೆಯಿಂದ ಸೇತುವೆಗಳು ಮುಳುಗಿ ಜನರಿಗೆ ತೊಂದರೆಯಾದಾಗ, ಪರ್ಯಾಯ ಮಾರ್ಗದ ಮೂಲಕ ಸ್ಥಳಾಂತರ ಮಾಡಬೇಕು ಎಂದು ಸೂಚಿಸಿದರು.

ತಹಸೀಲ್ದಾರ್ ಮಂಜುಳಾ ನಾಯಕ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಽಕಾರಿ ಟಿ.ಆರ್.ಮಲ್ಲಾಡದ, ಬಿಇಒ ಪ್ರಭಾವತಿ ಪಾಟೀಲ, ವಿದ್ಯುತ್ ಸಹಕಾರಿ ಸಂಘದ ರೆಸಿಡೆಂಟ್ ಇಂಜಿನಿಯರ್ ನೇಮಿನಾಥ ಖೆಮಲಾಪುರೆ, ತಾಲೂಕು ವೈದ್ಯಾಧಿಕಾರಿ ಡಾ.ಉದಯ ಕುಡಚಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ಆರ್.ಕಳ್ಳಿಮನಿ, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ವಿನಾಯಕ ಪೂಜಾರಿ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪುರೆ ಇತರರಿದ್ದರು. ಉಪತಹಸೀಲ್ದಾರ್ ಅನಿತಾ ಏಶಿ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net