ಸಂಭಾವ್ಯ 3ನೇ ಅಲೆ ನಿಯಂತ್ರಣಕ್ಕೆ ಸಜ್ಜು ; ಜಿಲ್ಲೆಯ ಮಕ್ಕಳ ತಜ್ಞರ ಜತೆ ಸಚಿವ ಜೆ.ಸಿ.ಮಾಧುಸ್ವಾಮಿ ಚರ್ಚೆ

29TMK_JCM_Workshop
Published on

ತುಮಕೂರು : ಸಂಭಾವ್ಯ ಕರೊನಾ 3ನೇ ಅಲೆಯ ನಿಯಂತ್ರಣಕ್ಕೆ ಪೂರ್ವ ಸಿದ್ಧತೆ ಕುರಿತು ಜಿಲ್ಲೆಯ ಮಕ್ಕಳ ತಜ್ಞರ ಜತೆ ಜಿಪಂ ಸಭಾಂಗಣದಲ್ಲಿ ಮಂಗಳವಾರ ಮೂರುವರೆ ಗಂಟೆಗಳ ಕಾಲ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಮಕ್ಕಳ ತಜ್ಞರು ಭಾಗವಹಿಸಿ ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ನಿರೀಕ್ಷಿತ ಮೂರನೇ ಅಲೆಯ ಪೂರ್ವ ಸಿದ್ಧತೆ ಬಗ್ಗೆ ಮಕ್ಕಳ ತಜ್ಞರಾದ ಡಾ.ಸುಪ್ರಜಾ ಚಂದ್ರಶೇಖರ್ ಮತ್ತು ಡಾ.ಗುರುದತ್ ಅವರು ವೈದ್ಯರಿಗೆ ಮಕ್ಕಳ ಆರೈಕೆ, ಚಿಕಿತ್ಸೆ ನೀಡುವ ಬಗೆ ವಿವರಿಸಿದರು.

ಬೆಂಗಳೂರು ಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆ ಮಕ್ಕಳ ತಜ್ಞೆ ಡಾ.ಸುಪ್ರಜಾ ಚಂದ್ರಶೇಖರ್ ಮಾತನಾಡಿ, ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡುವ ಕ್ರಮ, ನಂತರದಲ್ಲಿ ಅವರ ಆರೈಕೆ, ಮನೆಯಲ್ಲಿ ಚಿಕಿತ್ಸೆ, ಆಸ್ಪತ್ರೆಯಲ್ಲಿ ಚಿಕಿತ್ಸೆ, ಹಾಸಿಗೆಗಳ ವ್ಯವಸ್ಥೆ ಸೇರಿ ಇತರ ರಕ್ಷಣೆ ಕುರಿತು ವಿವರಿಸಿದರು.

ಶ್ವಾಸಕೋಶ ತಜ್ಞ ಡಾ.ಗುರುದತ್ ಮಾತನಾಡಿ, ಮಕ್ಕಳಿಗೆ ಮಾಸ್ಕ್ ಬಳಕೆ, ಸೋಂಕಿನ ಲಕ್ಷಣಗಳು, ಹಂತ ಹಂತವಾಗಿ ಚಿಕಿತ್ಸೆ, ವಿವಿಧ ಪ್ರಕರಣಗಳಲ್ಲಿ ಹೇಗೆ ಚಿಕಿತ್ಸೆ ಮಾಡಬೇಕು ಎಂಬುದು ಸೇರಿ ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣೆ, ನಂತರ ತಾಲೂಕು ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡುವ ಕ್ರಮ ಹೇಗೆ? ಗಂಭೀರ ಸ್ಥಿತಿ ತಲುಪಿದ ಮಕ್ಕಳಿಗೆ ಚಿಕಿತ್ಸೆ ನೀಡುವುದು ಹೇಗೆ ಎಂಬುದು ಸೇರಿ ಒಟ್ಟಾರೆ ಮಕ್ಕಳ ರಕ್ಷಣೆಗೆ ಹೇಗೆಲ್ಲಾ ಸಜ್ಜಾಗಬೇಕೆಂಬ ಎಲ್ಲ ಆಯಾಮಗಳ ಬಗ್ಗೆ ವೈದ್ಯರಿಗೆ ಜಾಗೃತಿ ಮೂಡಿಸಿದರು.

ಜಿಲ್ಲೆಯಲ್ಲಿ ಸಂಭಾವ್ಯ ಕೋವಿಡ್ ಮೂರನೇ ಅಲೆ ತಡೆಗೆ ಕೈಗೊಳ್ಳಬೇಕಾದ ಸಿದ್ಧತಾ ಕ್ರಮಗಳ ಬಗ್ಗೆ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ.ರಜನಿ ಮಾಹಿತಿ ಒದಗಿಸಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾಸ್ಪತ್ರೆ ಮಕ್ಕಳ ತಜ್ಞ ಡಾ.ವಿನಯ್, ಆರ್‌ಸಿಎಚ್ ಅಧಿಕಾರಿ ಡಾ.ಕೇಶವರಾಜು ಇದ್ದರು.

2ನೇ ಅಲೆ ಗೆದ್ದಿದ್ದೇವೆ...: ಸಾಮಾಜಿಕ ಕಳಕಳಿ ಸೇವಾ ಕಾರ್ಯ ಹಾಗೂ ಎ್ಲರ ಸಹಕಾರದಿಂದ ಸಂಭಾವ್ಯ ಕೋವಿಡ್ 3ನೇ ಅಲೆ ತಡೆಯಲು ಸಾಧ್ಯ. ಎಲ್ಲರಿಗೂ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ, ಅಂತಹ ಸೇವಾ ಭಾಗ್ಯದ ಅವಕಾಶ ವೈದ್ಯರಿಗಿದ್ದು ಅಹಂ ತ್ಯಜಿಸಿ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸಿ ಜಿಲ್ಲೆಯ ಋಣ ತೀರಿಸಬೇಕು ಎಂದು ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು.

ಆಮ್ಲಜನಕ, ಹಾಸಿಗೆ ಸೇರಿ ಹಲವು ಸಮಸ್ಯೆಗಳ ನಡುವೆಯೂ ಕೈಮೀರಿ ಹೋಗುತ್ತಿದ್ದ ಕರೊನಾ ಎರಡನೇ ಅಲೆಯನ್ನು ಗೆದ್ದಿದ್ದೇವೆ. ಶೇ.40 ರಿಂದ 45 ಕರೊನಾ ಪಾಸಿಟಿವಿಟಿ ಪ್ರಮಾಣ ಇದ್ದ ಜಿಲ್ಲೆಯನ್ನು ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ ನಿಯಂತ್ರಣಕ್ಕೆ ತರಲಾಗಿದೆ. ಪ್ರಸ್ತುತ ಜಿಲ್ಲೆ ಕರೊನಾ ಭೀತಿಂದ ಹೊರಬಂದಿದೆ. ಅಂತೆಯೇ ನಿರೀಕ್ಷೆಯ ಮೂರನೇ ಅಲೆ ನಿಯಂತ್ರಣಕ್ಕೆ ಶಕ್ತಿ ಮೀರಿ ಕಾರ್ಯ ನಿರ್ವಹಿಸೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net