

ಚಿಕ್ಕಬಳ್ಳಾಪುರ: ವಿಷಯಾಧಾರಿತ ತರಬೇತಿ ಕಾರ್ಯಾಗಾರದ ಸಂಪನ್ಮೂಲ ಉಪನ್ಯಾಸಕರಿಗೆ ಸಂಭಾವನೆ ಮತ್ತು ವಿಶೇಷ ಭತ್ಯೆ ನೀಡದಿರುವುದಕ್ಕೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ನಗರದ ಸಂತ ಜೋಸ್ೆ ಕಾನ್ವೆಂಟ್‌ನಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸದೇ ದೂರ ಉಳಿದ ಉಪನ್ಯಾಸಕರು ಹಿರಿಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಜತೆಗೆ ಭತ್ಯೆ ನೀಡುವವರೆಗೂ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಜಿಲ್ಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ 2018ನೇ ಸಾಲಿನ ಜುಲೈ 30ರಿಂದ ಆಗಸ್ಟ್ 5 ರವರೆಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅರ್ಥಶಾಸದ ವಿಷಯಾಧಾರಿತ ತರಬೇತಿ ಕಾರ್ಯಾಗಾರದಲ್ಲಿ 30 ಉಪನ್ಯಾಸಕರು ಭಾಗವಹಿಸಿದ್ದು 28 ಅಧಿವೇಶನಗಳನ್ನು ನಡೆಸಲಾಯಿತು. ಕಾರ್ಯಾಗಾರಕ್ಕಾಗಿ ಇಲಾಖೆಯ ಕೇಂದ್ರ ಕಚೇರಿಯು ಮೊದಲ ಕಂತಿನಲ್ಲಿ 1,07,780 ರೂ. ಮತ್ತು 2ನೇ ಕಂತಿನಲ್ಲಿ 16,720 ರೂ.ಗಳನ್ನು ನೀಡಿದೆ. ಇದರಲ್ಲಿ ಸಂಭಾವನೆಗೆ 58,800 ರೂ. ಮತ್ತು ಪ್ರಯಾಣ ಭತ್ಯೆ 15 ಸಾವಿರ ರೂ. ಸೇರಿ 73,800 ರೂ.ಗಳನ್ನು ಉಪನ್ಯಾಸಕರಿಗೆ ಮೀಸಲಿಟ್ಟಿದ್ದು 9 ಮಂದಿಗೆ ಮಾತ್ರ ವಿತರಿಸಲಾಗಿದೆ. ಈ ಕುರಿತು ಕಚೇರಿಯಲ್ಲಿ ಪ್ರಶ್ನಿಸಿದರೆ ಹಾರಿಕೆಯ ಉತ್ತರ ಸಿಗುತ್ತಿದೆ ಎಂದು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಜಿಲ್ಲಾ ಸಂಘದ ಅಧ್ಯಕ್ಷ ಮುನಿರೆಡ್ಡಿ ಆರೋಪಿಸಿದರು.
ಈಗಾಗಲೇ ಹಲವು ಬಾರಿ ಗಮನಕ್ಕೆ ತಂದು ಸಮಸ್ಯೆ ಪರಿಹಾರ ಒತ್ತಾಯಿಸಲಾಗಿದೆ. ಇನ್ನೂ ಸ್ಪಂದಿಸದಿದ್ದಲ್ಲಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪಿಯು ಡಿಡಿಪಿಐ ಸೀತಾರಾಮರೆಡ್ಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸಂಘದ ಕಾರ್ಯಾಧ್ಯಕ್ಷ ಎಸ್.ಸಿ.ಪದ್ಮರಾಜ್, ಪ್ರಧಾನ ಕಾರ್ಯದರ್ಶಿ ಬಸವರಾಜ್, ಖಜಾಂಚಿ ನಂಜಿರೆಡ್ಡಿ ಮತ್ತಿತರರು ಇದ್ದರು.