

ಹಾಸನ: ಕಳೆದ ಮೂರು ತಿಂಗಳ ಸಂಬಳವನ್ನು ಕೂಡಲೇ ನೀಡುವಂತೆ ಆಗ್ರಹಿಸಿ ನಗರದ ಮಹಾರಾಜ ಪಾರ್ಕ್ ಆವರಣದಲ್ಲಿರುವ ಈಜು ಕೊಳದ ಎದುರು ನೀರು ಸರಬರಾಜು ಮತ್ತು ಒಳಚರಂಡಿ ಹೊರಗುತ್ತಿಗೆದಾರ ನೌಕರರ ಸಂಘದ ವತಿಯಿಂದ ಗುರುವಾರ ಮೌನ ಪ್ರತಿಭಟನೆ ನಡೆಸಿದರು.
ನೀರು ಸರಬರಾಜು ಮತ್ತು ಒಳಚರಂಡಿ ಹೊರಗುತ್ತಿಗೆದಾರ ನೌಕರರ ಸಂಘದ ಅಧ್ಯಕ್ಷ ಮೋಹನ್ ಮಾತನಾಡಿ, ನಗರಸಭೆ ವ್ಯಾಪ್ತಿಯ ನಾವು ಹೊರಗುತ್ತಿಗೆ ಆಧಾರದ ಮೇಲೆ ನೀರು ಸರಬರಾಜು ಹಾಗು ಒಳಚರಂಡಿ ಕೆಲಸ ಮಾಡುತ್ತಿದ್ದು, ಕಳೆದ ಮೂರು ತಿಂಗಳಿನಿಂದ ನಮಗೆ ಸಂಬಳ ನೀಡಿರುವುದಿಲ್ಲ. ಕಮಿಷನರ್, ಅಧ್ಯಕ್ಷರು ಹಾಗೂ ಅಧಿಕಾರಿ ವರ್ಗದವರ ಎಲ್ಲಾರನ್ನು ಸಂಬಳ ಕೇಳಿದಾಗ ಕೊಡುತ್ತೀವಿ ಎಂದು ಭರವಸೆ ನೀಡುತ್ತಾರೆ ಆದರೆ ಇದುವರೆಗೂ ಸಂಬಳ ನೀಡಿಲ್ಲ ಎಂದು ದೂರಿದರು.
ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 84 ಜನರು ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡಲಾಗುತ್ತಿದ್ದು, ನಮ್ಮ ಕೆಲಸಕ್ಕೆ ಮಾತ್ರ ಮಹತ್ವ ಕೊಟ್ಟು ಸಂಬಳವನ್ನು ಸರಿಯಾಗಿ ಕೊಡಲಾಗುತ್ತಿಲ್ಲ. 2016ರ ಇಸವಿಯಿಂದಲೂ ಇದೆ ಸಮಸ್ಯೆಯಾಗಿ ಹೋಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ನಮಗೆ ಸಂಬಳ ಬಂದರೆ ಮಾತ್ರ ನಮ್ಮ ಕುಟುಂಬ ನಿರ್ವಹಣೆ ಮಾಡಬಹುದು. ಜೊತೆಗೆ ಮಕ್ಕಳ ವಿದ್ಯಾಭ್ಯಾಸವನ್ನು ಕೂಡ ನಮ್ಮ ಸಂಬಳದಿಂದಲೇ ಭರಿಸಿ ಕೊಡಿಸಬೇಕು. ನೀರು ಸರಬರಾಜು, ಯುಜಿಡಿ ಒಳಚರಂಡಿಯ ಏನೆ ಸಮಸ್ಯೆ ಇದ್ದರೂ ನಾವೆ ನಿರ್ವಹಿಸಬೇಕು. ಈ ರೀತಿ ಸಂಬಳ ಕೊಡದೇ ಇರುವುದರಿಂದ ನಮ್ಮ ಜೀವನವೇ ಬೀದಿಪಾಲಿಗೆ ಬರುವ ಪರಿಸ್ಥಿತಿಗೆ ಬಂದಿದೆ ಎಂದ ಅವರು ಕೂಡಲೇ ನಮಗೆ ಬರಬೇಕಾದ ಮೂರು ತಿಂಗಳ ಸಂಬಳವನ್ನು ನೀಡಿ ನಮಗೆ ಸೌಕರ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ಪರಮೇಶ್, ಉಪಾಧ್ಯಕ್ಷ ರಜಿನಿಕಾಂತ್, ನಾಗೇಶ್, ಕಾಂತರಾಜು, ಆನಂದ್ ಗಿರಿ, ಸುರೇಶ್ ಇತರರು ಇದ್ದರು.