ಸಂಬಳ ನೀಡುವಂತೆ ಆಗ್ರಹಿಸಿ ಪೌರಕಾರ್ಮಿಕರು ಪ್ರತಿಭಟನೆ

ಸಂಬಳ ನೀಡುವಂತೆ ಆಗ್ರಹಿಸಿ ಪೌರಕಾರ್ಮಿಕರು ಪ್ರತಿಭಟನೆ
Published on

   ಹಾಸನ: ಕಳೆದ ವರ್ಷ ನಗರಸಭೆಗೆ ತಾಲೂಕಿನ 9 ಗ್ರಾಮ ಪಂಚಾಯಿತಿಗಳನ್ನ ಸೇರ್ಪಡೆ ಮಾಡಿಕೊಳ್ಳಲಾಯಿತು. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತಹ ಸುಮಾರು 80 ಹೆಚ್ಚು ಜನ ಸಿಬ್ಬಂದಿಗಳಿಗೆ ಕಳದ 9 ತಿಂಗಳಿನಿಂದ ಸಂಬಳವಾಗಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದರು ಶುಕ್ರವಾರ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯಿತಿಯಲ್ಲಿ ನೀರು ಸರಬರಾಜಿ ವಾಲ್‌ಮ್ಯಾನ್ ಹಾಗೂ ಕರವಸೂಲಿಗಾರರಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಆದರೆ ಇತ್ತೀಚೆಗೆ 9 ಗ್ರಾಮ ಪಂಚಾಯಿತಿಯ 25 ಗ್ರಾಮಗಳನ್ನು ನಗರಸಭೆಗೆ ಸೇರ್ಪಡೆ ಮಾಡಿಕೊಂಡಿದ್ದು, ನಮಗೆ ಕಳೆದ 9 ತಿಂಗಳಿನಿಂದ ವೇತನ ನೀಡಿಲ್ಲ, ಇದರಿಂದ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.

ಈ ಉದ್ಯೋಗವನ್ನೇ ನಂಬಿಕೊಂಡು ಜೀವನ ಸಾಗಿಸುತ್ತೇವೆ, ಆದರೆ ನಮಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕ ತಂದರು ಕೂಡ ಯಾರು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

9 ತಿಂಗಳಿನಿಂದ ಸಂಬಳವಿಲ್ಲದೆ ಪೌರಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ, ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಜೀವನ ಸಾಗಿಸುವುದು, ಮಕ್ಕಳ ವಿದ್ಯಾಭ್ಯಾಸ, ಸಾಲದ ಮೇಲೆ ಪಡೆದಿದ್ದಂತಹ ವಾಹನಗಳನ್ನು ಕೂಡ ಇಎಂಐ ಕಟ್ಟಲು ಆಗದೆ ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕೂಡ ಇದುವರೆಗೂ ಸಂಬಳ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.

ಮುಂದಿನ ವಾರ ಗೌರಿ ಗಣೇಶ ಹಬ್ಬ ಬರುತ್ತಿದ್ದು, ಮನೆಗೆ ಯಾವುದೇ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೇವಲ ಸಬೂಬ್ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ತಕ್ಷಣವೇ ನಮ್ಮ ಸಂಬಳವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ನಮ್ಮ ಸಂಬಳ ಬಿಡುಗಡೆಯಾಗುವವರೆಗೂ ನಾವು ಅನಿರ್ದಿಷ್ಟ ಅವಧಿ ಪ್ರತಿಭಟನೆ ಮಾಡಲು ಕೂಡ ಹಿಂಜರಿಯುವುದಿಲ್ಲ, ಜೀವನಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಆದರೆ ಸಂಬಳವಿಲ್ಲದೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ಮುಂದುವರೆದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪೌರ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ಸಂತೋಷ್, ಸಂಜೀವ್, ಚೇತನ್, ದಿನೇಶ್, ಧನಂಜಯ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net