

ಬಾಳೆಹೊನ್ನೂರು: ಭಾರತೀಯ ಸಂಸ್ಕೃತಿಯಲ್ಲಿ ಬರುವ ಪ್ರತಿಯೊಂದು ಹಬ್ಬಗಳ ಆಚರಣೆಯ ಹಿಂದೆ ಒಂದು ಉದಾತ್ತ ಉದ್ದೇಶ ಇರುವುದನ್ನು ಕಾಣುತ್ತೇವೆ. ನಾಗರ ಪಂಚಮಿಯು ಸಂಬಂಧಗಳನ್ನು ಭದ್ರವಾಗಿ ಬೆಸೆಯುವ ಸಂಭ್ರಮದ ಹಬ್ಬ ಎಂದು ಡಾ. ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಮಂಗಳವಾರ ಶ್ರೀ ರಂಭಾಪುರಿ ಪೀಠದಲ್ಲಿ ನಾಗರ ಕಟ್ಟೆಗೆ ಹಾಲೆರೆದು ಆಶೀರ್ವಚನ ನೀಡಿದ ಅವರು, ನಾಗರ ಪಂಚಮಿ ನಾಡಿಗೆ ಬಹು ದೊಡ್ಡ ಹಬ್ಬ. ಶ್ರಾವಣ ಶುದ್ಧ ಪಂಚಮಿಯಂದು ಕಲ್ಲಿನ ನಾಗಪ್ಪನಿಗೆ ಹಾಲೆರೆದು ಪೂಜಿಸುವ ಸಂಪ್ರದಾಯವಿದೆ. ಗಂಡನ ಮನೆಯಿಂದ ಹೆಣ್ಣು ಮಕ್ಕಳು ತವರೂರಿಗೆ ಬಂದು ಹಬ್ಬ ಆಚರಿಸಿ ಸಂತೋಷಪಡುವುದನ್ನು ಕಾಣುತ್ತೇವೆ. ನಾಗರ ಪಂಚಮಿಯಂದು ಅಕ್ಕ-ತಂಗಿಯರು ಕೂಡಿ ಅಣ್ಣ-ತಮ್ಮರ ಆಯುಷ್ಯ ಗಟ್ಟಿಗೊಳಿಸಲು ನಾಗರಾಜನನ್ನು ಪ್ರಾರ್ಥಿಸಿ ಪೂಜಿಸುತ್ತಾರೆ ಎಂದರು.
ನಾಗದೋಷ ಇದ್ದವರು ಮತ್ತು ಸಂತಾನ ಇಲ್ಲದವರು ಸಹ ನಾಗಪ್ಪನನ್ನು ಪೂಜಿಸಿ ದೈವ ಕೃಪೆಗೆ ಪಾತ್ರರಾಗುತ್ತಾರೆ. ಜೀವನದ ಏಳು-ಬೀಳುಗಳಿಗೆ ಅಂಜದೆ ಸಂತೋಷದಿಂದ ಬಾಳೋಣ ಅನ್ನುವ ಉದ್ದೇಶದಲ್ಲಿ ಹೆಣ್ಣು ಮಕ್ಕಳು ಜೋಕಾಲಿ ಆಡಿ ಸಂತೋಷಪಡುತ್ತಾರೆ. ಹೆಣ್ಣು ಮಕ್ಕಳು ಕುಟುಂಬದ ಶ್ರೇಯಸ್ಸು, ಸಂಪತ್ತು ಮತ್ತು ಆರೋಗ್ಯ ಪ್ರಾಪ್ತಿಗಾಗಿ ನಾಗರಕಲ್ಲಿಗೆ ಹಾಲೆರೆದು ಪೂಜಿಸುತ್ತಾರೆ. ನಂಬಿಗೆ, ವಿಶ್ವಾಸಗಳನ್ನು ಕಳೆದುಕೊಳ್ಳದೆ ಸಂಬಂಧಗಳು ಮತ್ತಷ್ಟು ಗಾಢವಾಗಲೆಂಬ ಉದ್ದೇಶದಿಂದ ಹಬ್ಬದಾಚರಣೆ ಮಾಡುತ್ತೇವೆ ಎಂದು ಹೇಳಿದರು.