ಸಂಬಂಧ ಗಟ್ಟಿಗೊಳಿಸುವ ಶಿಕ್ಷಣ ಬೇಕು

Basaveshwar Collage
ಬಸವಕಲ್ಯಾಣದ ಬಸವೇಶ್ವರ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಸಿಪಿಐ ಅಲಿಸಾಬ್, ಬಸವರಾಜ ಕೋರಕೆ, ರಾಜಕುಮಾರ ಹೊಳಕುಂದೆ, ವಿವೇಕಾನಂದ ಹೊದಲೂರೆ, ಡಾ.ಭೀಮಾಶಂಕರ ಬಿರಾದಾರ್, ಪ್ರೊ.ವಿಜಯಲಕ್ಷ್ಮೀ ಗಡ್ಡೆ ಇತರರಿದ್ದರು.
Published on

ಬಸವಕಲ್ಯಾಣ: ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ, ಮಾನವೀಯತೆಗೆ ಮಹತ್ವ ನೀಡುವ ಶಿಕ್ಷಣ ಪ್ರಸ್ತುತ ಹೆಚ್ಚು ಅಗತ್ಯವಿದೆ. ಸಾಮಾಜಿಕ ಸ್ವಾಸ್ಥ್ಯಕಾಪಾಡುವ ಮನಸ್ಥಿತಿ ನಿರ್ಮಿಸುವ ವಿದ್ಯೆ ಬೇಕಾಗಿದೆ ಎಂದು ಸಿಪಿಐ ಅಲಿಸಾಬ್ ಹೇಳಿದರು.

ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಮಂಗಳವಾರ ವಾಣಿಜ್ಯ ವಿಭಾಗದಿಂದ ಆಯೋಜಿಸಿದ್ದ ಅರಿವು-ಆಚಾರ, ಸಾಮಾಜಿಕ ಹೊಣೆಗಾರಿಕೆ ಕುರಿತ ಉಪನ್ಯಾಸ ಹಾಗೂ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶ್ರಮ, ನಿರಂತರ ಅಧ್ಯಯನ ಯಶಸ್ಸಿನ ಮಾರ್ಗವಾಗಿದೆ ಎಂದರು.

ವಿದ್ಯಾವಂತರಾಗುವುದು ಒಂದು ಹಂತವಾದರೆ, ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವ, ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಜೀವನ ನಡೆಸುವುದು ಇನ್ನೊಂದು ಹಂತವಾಗಿದೆ. ವ್ಯಕ್ತಿಯ ಸಾಮಾಜಿಕ ಜೀವನ ಸವಾಲಿನಿಂದ ಕೂಡಿದೆ. ನಮ್ಮ ಬದುಕು ಪ್ರಜ್ಞಾಪೂರ್ವಕ ಹಾಗೂ ಎಚ್ಚರಿಕೆಯಿಂದ ಸಾಗಿಸಬೇಕು ಎಂದು ಹೇಳಿದರು.

ಬಿಡಿಪಿಸಿ ನಿರ್ದೇಶಕಿ ಪ್ರೊ.ವಿಜಯಲಕ್ಷ್ಮೀ ಗಡ್ಡೆ ಮಾತನಾಡಿ, ಎಷ್ಟೇ ಮುಂದುವರಿದ ಸಮಾಜದಲ್ಲಿಯೂ ಮಹಿಳೆ ಹಲವು ಸವಾಲುಗಳು ಎದುರಿಸುತ್ತಿದ್ದಾಳೆ. ಶಿಕ್ಷಣ, ಜ್ಞಾನ, ಕೌಶಲ್ಯಗಳು ಪಡೆದುಕೊಳ್ಳುವ ಮೂಲಕ ಮಹಿಳೆ ಸ್ವಾವಲಂಬಿ ಬದುಕು ನಡೆಸಬಹುದು. ಶರಣರ ಚಿಂತನೆ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿಗೊಂದು ಘನತೆ ಬರುತ್ತದೆ ಎಂದರು.

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ್ ಮಾತನಾಡಿ, ಕಾಲೇಜು ಕ್ಯಾಂಪಸ್‌ನಲ್ಲಿ ಹೊಸ ವಿಚಾರಗಳ, ಹೊಸ ಅನ್ವೇಷಣೆಗಳ, ಹೊಸ ಆವಿಷ್ಕಾರಗಳ ಮಾತುಕತೆ, ಚರ್ಚೆಗಳು ನಡೆದರೆ ಅಂಥ ಮಹಾವಿದ್ಯಾಲಯ ಜೀವಂತಿಕೆ ಉಳಿಸಿಕೊಂಡಿದೆ ಎಂದರ್ಥ. ಕ್ಯಾಂಪಸ್‌ನಲ್ಲಿ ವಿಜ್ಞಾನಿಗಳ, ಸಾಹಿತಿಗಳ, ಆರ್ಥಿಕ ತಜ್ಞರ ಜತೆ ವಿದ್ಯಾರ್ಥಿಗಳು ಸದಾ ಸಂವಾದಿಸುತ್ತಿದ್ದರೆ ಅಲ್ಲೊಂದು ಬೌದ್ಧಿಕ ವೈಚಾರಿಕ ಪರಂಪರೆ ಹುಟ್ಟಿಕೊಳ್ಳುತ್ತವೆ ಎಂದರು.

ಚಾರ್ಟೆಡ್ ಅಕೌಂಟೆಂಟ್ ರೋಮಾದೇವಿ ನೇಹಾಲ್‌ಸಿಂಗ್ ಮಾತನಾಡಿದರು. ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಅನೀಲಕುಮಾರ ರಗಟೆ, ಚಾರ್ಟೆಡ್ ಅಕೌಂಟೆಂಟ್ ನೇಹಾಲ್ ಸಿಂಗ್, ಪಿಯು ಪ್ರಾಚಾರ್ಯ ಡಾ.ರುದ್ರಮಣಿ ಮಠಪತಿ, ಅಶೋಕರಡ್ಡಿ, ಗಂಗಾಧರ ಸಾಲಿಮಠ, ಶ್ರೀನಿವಾಸ ಉಮಾಪುರೆ, ಚನ್ನಬಸಪ್ಪ ಗೌರ, ಸಚಿನ್ ಬಿಡವೆ, ವಿವೇಕಾನಂದ ಸಿಂಧೆ, ಪ್ರವೀಣ ಬಿರಾದಾರ್, ಪ್ರಶಾಂತ ಬುಡಗೆ, ಕೃಷ್ಣಪ್ಪ ಸದಲಾಪುರ, ಪವನ್ ಪಾಟೀಲ್, ಪ್ರಭಾಕರ ನವಗಿರೆ, ಸುಜಾವುದ್ದೀನ್, ಎಂ.ಡಿ. ಜಬಿ, ಗುರುದೇವಿ ಕಿಚಡೆ, ನಾಗವೇಣಿ ವಟಗೆ, ಸಂಗೀತಾ ಮಹಾಗಾಂವೆ, ಮಯೂರಿ ಪಾಟೀಲ್ ಇತರರಿದ್ದರು.

ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು. ಡಾ.ಶಾಂತಲಾ ಪಾಟೀಲ್ ಸ್ವಾಗತಿಸಿದರು. ರೋಷನ್ ಬಿ. ವಂದಿಸಿದರು.

ಗಂಭೀರವಾದ ಅಧ್ಯಯನದಿಂದ ಮನುಷ್ಯ ಲೋಕದಲ್ಲಿನ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸಂಬಂಧಗಳ ಎಳೆಗಳನ್ನು ಕಂಡುಕೊಳ್ಳಬಹುದು. ಓದುವ ಪ್ರವೃತ್ತಿ ಹೆಚ್ಚಾದಂತೆ ಅರಿವು ವಿಸ್ತಾರಗೊಳ್ಳುತ್ತದೆ. ಪ್ರಸ್ತುತ ಶಿಸ್ತಿನ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕು.

| ಡಾ.ಭೀಮಾಶಂಕರ ಬಿರಾದಾರ್ ಪ್ರಾಚಾರ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net