ಸಂಪ್ರದಾಯ, ಕಟ್ಟುಪಾಡು ನೆಪದಲ್ಲಿ ದಲಿತರ ಶೋಷಣೆ

21 0
Published on

ಡಾ.ಬಸವರಾಜು ವಿಷಾದ, ಮಹಾಡ್​ ಸತ್ಯಾಗ್ರಹ ನೆನಪು ಕಾರ್ಯಕ್ರಮ

ತುಮಕೂರು: ಸಂಪ್ರದಾಯ, ಕಟ್ಟುಪಾಡುಗಳ ಹೆಸರಿನಲ್ಲಿ ಈ ನೆಲದ ದಲಿತರನ್ನು ಪ್ರಾಣಿ, ಪಕ್ಷಿಗಳಿಗಿಂತಲೂ ಕೀಳಾಗಿ ಕಾಣುತ್ತಿದ್ದ ಚಾರ್ತುವರ್ಣದ ವ್ಯವಸ್ಥೆಯ ವಿರುದ್ಧ ಮೊದಲ ಹೋರಾಟವೇ ಮಹಾಡ್​ನ ಚೌಧರ್​ ಕೆರೆ ನೀರು ಮುಟ್ಟುವ ಐತಿಹಾಸಿಕ ಚಳವಳಿಯಾಗಿದೆ ಎಂದು ವೈದ್ಯ ಡಾ.ಬಸವರಾಜು ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್​ವಾದ ತುಮಕೂರು ಜಿಲ್ಲಾ ಸಮಿತಿ, ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಭಾರತದ ಅಸ್ಪಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್​ ಸತ್ಯಾಗ್ರಹ ನೆನಪು ಕಾರ್ಯಕ್ರಮಕ್ಕೆ, ಮನುಸ್ಮ$ತಿಯ ಹಾಳೆಗಳನ್ನು ಹರಿದು, ಗಿಡಕ್ಕೆ ನೀರೇರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಹಣಬಲ, ತೋಳ್ಬಲಗಳಿಗಿಂತ, ಬುದ್ಧಿಬಲದ ಮೂಲಕವೇ ಪ್ರಕೃತಿಯಲ್ಲಿನ ವಸ್ತುಗಳ ಮೇಲೆ ದಲಿತರಿಗೂ ಸಮಾನ ಹಕ್ಕಿದೆ ಎಂದು ಪ್ರತಿಪಾದಿಸಿದ ಮಹತ್ವದ ದಿನವಿದು. ಇದರ ಜತೆಗೆ, ಅಸಮಾನತೆಗೆ ಕಾರಣವಾದ ಮನುಸ್ಮ$ತಿಯನ್ನು ಸುಡುವ ಮಹತ್ವದ ಕ್ರಾಂತಿಗೆ ಮುನ್ನುಡಿ ಬರೆದ ದಿನ. ಹಾಗಾಗಿಯೇ ಇಂದು ಚಾರ್ತುವರ್ಣದ ಮೂಲವಾದ ಮನುಸ್ಮ$ತಿ ಸುಟ್ಟು, ಸಮಾನತೆಯ ಸಂಕೇತವಾದ ಪ್ರಕೃತಿಗೆ ನೀರೇರುವ ಮೂಲಕ ಈ ದಿನವನ್ನು ನೆನಪು ಮಾಡಿಕೊಂಡಿದ್ದೇವೆ ಎಂದರು.

ಡಾ.ಬಾಬಾ ಸಾಹೇಬ್​ ಅಂಬೇಡ್ಕರ್​ ಅವರು 1927ರ ಮಾ.20ರಂದು ಸಾಂಕೇತಿಕವಾಗಿ ಚೌದರ್​ ಕೆರೆ ನೀರನ್ನು ಮುಟ್ಟುವ ಮೂಲಕ ಪಂಚಭೂತಗಳಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ ಎಂದು ಪ್ರತಿಪಾದಿಸಿ ಹಚ್ಚಿದ ಹಣತೆ ಇಂದು ದೊಡ್ಡ ಬೆಳಕಾಗಿ, ದಲಿತರಲ್ಲಿ ಹಲವಾರು ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಆದರೆ ಕಾನೂನಿನ ಮೂಲಕ ರಕ್ಷಣೆ ಇದ್ದರೂ, ಕೊಳಕು ಮನಸ್ಥಿತಿಗಳಲ್ಲಿ ಬದಲಾವಣೆ ಕಾಣದೆ, ಇಂದಿಗೂ ಜಾತಿಯ ಹೆಸರಿನಲ್ಲಿ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿವೆ. ದಲಿತರು ಅಂಬೇಡ್ಕರ್​ ಪ್ರತಿಮೆ ಸ್ಥಾಪಿಸಿ ಅವರನ್ನು ದೇವರಾಗಿಸಲು ಹೊರಟ್ಟಿದ್ದು, ಅವರ ವಿಚಾರಗಳನ್ನು ಪಸರಿಸುವ ಮೂಲಕ ಅವರನ್ನು ವಿಶ್ವಮಾನವರನ್ನಾಗಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಡಾ.ಬಸವರಾಜು ವಿಷಾದ ವ್ಯಕ್ತಪಡಿಸಿದರು. ತುಮಕೂರು ವಿವಿ ಕನ್ನಡ ಅಧ್ಯಯನ ಕೇಂದ್ರ ಪ್ರಾಧ್ಯಾಪಕ ಡಾ.ನಾಗಭೂಷಣ್​ ಬಗ್ಗನಡು ಮಾತನಾಡಿ, ಮಹಾಡ್​ ಕೆರೆ ನೀರು ಮುಟ್ಟಿದ ದಿನ, ದಲಿತರ ಅರಿವಿನ ಪ್ರಜ್ಞೆ ವಿಸ್ತರಣೆಯಾದ ದಿನ. ಬಾಬಾ ಸಾಹೇಬ್​ ಅಂಬೇಡ್ಕರ್​ ಅವರು ರಕ್ತರಹಿತ ಕ್ರಾಂತಿಯ ಮೂಲಕ ಪ್ರಕೃತಿಯ ಮೇಲೆ ದಲಿತ ಸಮುದಾಯದ ಹಕ್ಕು ಪ್ರತಿಪಾದಿಸಿದ ದಿನ ಎಂದರು.

ಭಾರತದ ದಲಿತರ ಪಾಲಿಗೆ 1927ರ ಮಾರ್ಚ 20ರಂದು ಮಹಾಡ್​ನ ಚೌದರ ಕೆರೆ ನೀರು ಮುಟ್ಟುವುದು ಮತ್ತು ಡಿಸೆಂಬರ್​ 27ರಂದು ಮನುಸ್ಮ$ತಿಯನ್ನು ಸುಟ್ಟು ಹಾಕುವ ಮೂಲಕ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ದಲಿತರನ್ನು ಎಚ್ಚರಿಸಿದ ವರ್ಷ. ಈ ಘಟನೆ ನಡೆದು ಸುಮಾರು 98 ವರ್ಷಗಳು ಸಂದಿವೆ. ಇಂದು ದಲಿತರ ಸ್ಥಿತಿಗತಿ ಏನಾಗಿದೆ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ದಿನವಾಗಿದೆ ಎಂದರು.

ಸಾಮಾಜಿಕ ಹೋರಾಟಗಾರ ವಿ.ಎಲ್​.ನರಸಿಂಹಮೂರ್ತಿ ಮಾತನಾಡಿ, ಚೌದರ್​ ಕೆರೆಯ ನೀರು ಮುಟ್ಟುವ ಮೂಲಕ ದಲಿತರ ಹಕ್ಕು ಪ್ರತಿಪಾದನಾ ಚಳವಳಿ ನಡೆದು ಶತಮಾನಗಳಾಗತ್ತಾ ಬಂದಿದ್ದರೂ ಇಂದಿಗೂ ದಲಿತರು ತಮ್ಮ ಹಕ್ಕುಗಳನ್ನು ಸ್ಥಾಪಿಸಲು ಮುಂದಾದಾಗ ದೌರ್ಜನ್ಯ, ದಬ್ಬಾಳಿಕೆಗಳಿಗೆ ಒಳಗಾಗುತ್ತಲೇ ಇದ್ದಾರೆ. ನೀರು, ಆಹಾರ, ಭೂಮಿ, ಸ್ಮಶಾನದಂತಹ ವಿಚಾರಗಳಲ್ಲಿ ಇಂದಿಗೂ ಘರ್ಷಣೆೆಗಳು ನಡೆಯುತ್ತಲೇ ಇವೆ ಎಂದರು.ದಸಂಸ ಅಂಬೇಡ್ಕರ್​ ವಾದದ ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ, ಮುಖಂಡರಾದ ಚೇಳೂರು ಶಿವನಂಜಪ್ಪ, ಕುಪ್ಪೂರು ಶ್ರೀಧರ್​ ಅವರನ್ನು ಸನ್ಮಾನಿಸಲಾಯಿತು. ಡಾ.ಕೆಂಪರಾಜು, ಕಮನುಚಕ್ರವರ್ತಿ, ಕುಂದೂರು ಮುರುಳಿ, ಕೆ.ಎಚ್​.ರಂಗನಾಥ, ಶ್ರೀನಿವಾಸ್​, ಭಾಗ್ಯಮ್ಮ, ಶಿವಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net