

ಗದಗ: ಕರೊನಾ ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಕಠಿಣ ಲಾಕ್ಡೌನ್ಗೆ ಗುರುವಾರ ಜಿಲ್ಲಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬೆಳಗ್ಗೆ 10 ಗಂಟೆಯೊಳಗೆ ದಿನಸಿ ಸೇರಿದಂತೆ ಮತ್ತಿತರ ವಸ್ತುಗಳ ಖರೀದಿಸಿ ಜನರು ಮನೆ ಸೇರಿಕೊಂಡರು.
10 ಗಂಟೆ ನಂತರ ಅವಳಿ ನಗರ ಸೇರಿ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ ಮಾಡಲಾಯಿತು. ಅನಗತ್ಯ ತಿರುಗಾಟಕ್ಕೆ ಅವಕಾಶ ಇರಲಿಲ್ಲ. ವಿನಾಕಾರಣ ಸಂಚರಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರಿಂದ ಜನರ ಸಂಚಾರ ವಿರಳವಾಗಿತ್ತು. ಸರ್ಕಾರಿ ನೌಕರರು, ಆಸ್ಪತ್ರೆಗೆ ತೆರಳುವವರು ಮಾತ್ರ ಸಂಚರಿಸಿದರು. ಅವಳಿ ನಗರದ ಬಹುತೇಕ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಕೆಲವೆಡೆ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳ ಮಾಲೀಕರಿಗೆ ಪೊಲೀಸರು ಬಿಸಿ ಮುಟ್ಟಿಸಿ ವಾಹನಗಳನ್ನು ಸೀಜ್ ಮಾಡಿದರು.
ಮದ್ಯ ಮಾರಾಟ ಜೋರು: ಐದು ದಿನಗಳ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಗುರುವಾರ ಮದ್ಯ ಮಾರಾಟ ಜೋರಾಗಿತ್ತು. ಬಾರ್ಗಳು, ಮದ್ಯದಂಗಡಿಗಳು ಜನರಿಂದ ತುಂಬಿದ್ದವು. ಜನರು ಬಾಕ್ಸ್ಗಟ್ಟಲೇ ಮದ್ಯ ಖರೀದಿಸಿ ಮನೆಗೆ ಕೊಂಡೊಯ್ದರು.
ವ್ಯಾಪಾರಿಗಳಿಂದ ದಿನಸಿ ಪೂರೈಕೆ
ಅವಳಿ ನಗರದ ಎಲ್ಲ ದಿನಸಿ ಅಂಗಡಿಗಳ ವ್ಯಾಪಾರಿಗಳು ನೇರವಾಗಿ ಮನೆಗಳಿಗೆ ದಿನಸಿ ಸಾಮನುಗಳನ್ನು ಸರಬರಾಜು ಮಾಡಲು ಅನುಮತಿ ನೀಡಲಾಗಿದೆ. ಸಾರ್ವಜನಿಕರು ವ್ಯಾಪಾರಸ್ಥರ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅಥವಾ ವಾಟ್ಸ್ ಆಪ್ ಮೂಲಕ ದಿನಸಿ ಸಾಮಾನುಗಳ ಪಟ್ಟಿ ಸಲ್ಲಿಸಿ ಖರೀದಿಸಬಹುದು ಎಂದು ನಗರಸಭೆ ಪೌರಾಯುಕ್ತ ರಮೇಶ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಪಿಎಂಸಿಗೆ ಕಾಳು-ಕಡಿ ತರಬೇಡಿ
ಗದಗ: ಸಂಪೂರ್ಣ ಲಾಕ್ಡೌನ್ ಹಿನ್ನೆಲೆಯಲ್ಲಿ ಗದಗ ಎಪಿಎಂಸಿಯಲ್ಲಿ ಕಾಳು-ಕಡಿ, ಇತರೆ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ಆದರೆ, ಮುಖ್ಯ ಮಾರುಕಟ್ಟೆಯಲ್ಲಿ ಪ್ರತಿ ದಿನ ರಾತ್ರಿ 12 ಗಂಟೆಯಿಂದ ಬೆಳಗ್ಗೆ 4 ಗಂಟೆಯ ವರೆಗೆ ಹಣ್ಣು, ತರಕಾರಿ ಮತ್ತು ಹೂವಿನ ಸಗಟು ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ರೈತರು ಕಾಳು-ಕಡಿ ಮತ್ತು ಇತರೆ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಬಾರದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟ
ಗದಗ: ನಗರಸಭೆಯ ಸಭಾ ಭವನದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಗುರುವಾರ ಬೀದಿ ಬದಿ ವ್ಯಾಪಾರಸ್ಥರ ಸಂಘದ ಸಭೆ ಜರುಗಿತು.
ಜಿಲ್ಲೆಯಲ್ಲಿ ಒಟ್ಟು 240 ರಿಂದ 250 ತಳ್ಳುವ ಗಾಡಿಗಳಿವೆ. ಸಾರ್ವಜನಿಕರಿಗೆ ಕೊರತೆಯಾಗದಂತೆ ಹಾಗೂ ದರಗಳಲ್ಲಿ ವ್ಯತ್ಯಾಸವಾಗದಂತೆ ಪ್ರತಿ ಒಂದು ವಾರ್ಡ್ಗೆ ಪ್ರತಿದಿನ ಅಂದಾಜು 2885 ಕೆ.ಜಿ ವಿವಿಧ ಮಾದರಿಯ ತರಕಾರಿಗಳು ಹಾಗೂ 1025 ಕೆ.ಜಿ ಹಣ್ಣು ಹಂಪಲುಗಳನ್ನು ಮಾರಾಟ ಮಾಡಲು ಯೋಜಿಸಲಾಗಿದೆ ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅನ್ವರ್ ಶಿರಹಟ್ಟಿ ತಿಳಿಸಿದರು.
ವ್ಯಾಪಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕು. ಹೂವು, ಹಣ್ಣು ಮತ್ತು ತರಕಾರಿಗಳನ್ನು ತಳ್ಳುವ ಗಾಡಿ ಅಥವಾ ಆಟೋ ರಿಕ್ಷಾಗಳ ಮೂಲಕ ಆಯಾ ವಾರ್ಡ್ಗಳಲ್ಲಿ ಸಂಚರಿಸಿ ಮಾರಾಟ ಮಾಡಬೇಕು ಹಾಗೂ ಸಾರ್ವಜನಿಕರು ತರಕಾರಿ, ಹಣ್ಣು ಮತ್ತು ಇತರೆ ಅಗತ್ಯ ವಸ್ತುಗಳನ್ನು ಖರೀದಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು. ಯೋಜನಾ ನಿರ್ದೇಶಕ ಅನಿಲಕುಮಾರ ಮುದ್ದಾ ಹಾಗೂ ವ್ಯಾಪಾರಸ್ಥರು ಇದ್ದರು.
ಮುಂಡರಗಿ ಸಂಪೂರ್ಣ ಸ್ತಬ್ಧ
ಮುಂಡರಗಿ: ಜಿಲ್ಲಾದ್ಯಂತ ಕಠಿಣ ಲಾಕ್ಡೌನ್ ಹಿನ್ನೆಲೆಯಲ್ಲಿ ಪಟ್ಟಣವು ಗುರುವಾರ ಸಂಪೂರ್ಣ ಸ್ತಬ್ಧವಾಗಿತ್ತು. ಆಸ್ಪತ್ರೆ, ಔಷಧ ಅಂಗಡಿ ಹೊರತುಪಡಿಸಿ ಇನ್ನುಳಿದ ಎಲ್ಲ ಅಂಗಡಿಗಳ ವ್ಯಾಪಾರ-ವಹಿವಾಟು ಬಂದ್ ಆಗಿತ್ತು.
ಕೊಪ್ಪಳ ಸರ್ಕಲ್, ಬಸ್ ನಿಲ್ದಾಣ ಮೊದಲಾದ ಕಡೆಗಳಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದರು. ಅನವಶ್ಯಕವಾಗಿ ಸಂಚರಿಸುತ್ತಿದ್ದ 20 ಬೈಕ್ಗಳನ್ನು ಪೊಲೀಸರು ಸೀಜ್ ಮಾಡಿದರು. ಕೆಲವೆಡೆ ಸಾರ್ವಜನಿಕರು 10 ಗಂಟೆ ನಂತರವು ಅನವಶ್ಯಕ ಓಡಾಡುತ್ತಿರುವುದು ಕಂಡುಬಂತು. ಮುಖ್ಯಬಜಾರ್ ಸೇರಿ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ನಿಗದಿತ ಅವಧಿ ಮೀರಿ ತೆರೆಯಲಾಗಿದ್ದ 4 ಕಿರಾಣಿ ಅಂಗಡಿಗಳ ಮೇಲೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು. ಗುರುವಾರದಿಂದ ಐದು ದಿನಗಳವರೆಗೆ ಅಗತ್ಯ ವಸ್ತುಗಳ ಅಂಗಡಿಗಳು ಬಂದ್ ಆಗುತ್ತವೆ ಎಂದು ತಿಳಿದ ಜನರು ಬುಧವಾರವೇ ಅಗತ್ಯ ದಿನಸಿ ವಸ್ತುಗಳನ್ನು ಖರೀದಿಸಿದ್ದರು. ಹೀಗಾಗಿ ಗುರುವಾರ ಕಿರಾಣಿ ಅಂಗಡಿ ಇತರ ಕಡೆಗಳಲ್ಲಿ ಹೆಚ್ಚು ಜನಸಂದಣಿ ಕಂಡುಬರಲಿಲ್ಲ.
ಅಬ್ಬಿಗೇರಿಯಲ್ಲಿ ಮನೆ ಮನೆಗೆ ಪಡಿತರ ವಿತರಣೆ
ನರೇಗಲ್ಲ: ಸಮೀಪದ ಅಬ್ಬಿಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗುರುವಾರ ಮನೆ ಮನೆಗೆ ಪಡಿತರ ವಿತರಣೆಗೆ ಜಿಪಂ ಸಿಇಒ ಭರತಕುಮಾರ ಗುರುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಸಾರ್ವಜನಿಕರು ಪಡಿತರ ಪಡೆಯಲು ರೇಷನ್ ಅಂಗಡಿಗಳ ಮುಂದೆ ಸರತಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಪಡಿತರವನ್ನು ವಾಹನದಲ್ಲಿ ತುಂಬಿಸಿಕೊಂಡು ಮನೆ ಮನೆಗೆ ತೆರಳಿ ವಿತರಣೆ ಮಾಡಲಾಗುತ್ತಿದೆ. ನಿಮ್ಮ ಪ್ರದೇಶಕ್ಕೆ ಪಡಿತರ ವಿತರಣೆ ವಾಹನ ಬಂದಾಗ ಧಾವಂತಕ್ಕೆ ಬಿದ್ದು ಗುಂಪು ಸೇರಬಾರದು. ಎಲ್ಲರ ಮನೆಗೂ ಪಡಿತರ ವಿತರಣೆಯಾಗಲಿದೆ. ಯಾವುದೇ ಕಾರಣಕ್ಕೂ ಕರೊನಾ ನಿಯಮಾವಳಿ ಮರೆಯಬಾರದು. ಪಡಿತರ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡದೇ ಸಮರ್ಪಕವಾಗಿ ವಿತರಣೆಯಾಗುವಂತೆ ಪಡಿತರ ವಿತರಕರು ಗಮನ ಹರಿಸಬೇಕು. ಜಿಲ್ಲಾಡಳಿತ ಕರೊನಾ ಮಹಾಮಾರಿಯ ನಿಯಂತ್ರಣಕ್ಕಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರ ಸಹಕಾರ ಪ್ರಮುಖವಾಗಿದೆ’ ಎಂದರು. ಇದೇ ಸಂದರ್ಭದಲ್ಲಿ ನಿರ್ಗತಿಕರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಕಹಾರಿ ಸಂಘದ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು. ಸಂಘದ ಅಧ್ಯಕ್ಷ ಎಂ.ಎಂ. ಚನ್ನಪ್ಪಗೌಡ್ರ, ರೋಣ ತಹಸೀಲ್ದಾರ್ ಜಿ.ಬಿ. ಜಕ್ಕನಗೌಡ್ರ, ತಾಪಂ ಇಒ ಸಂತೋಷ ಪಾಟೀಲ, ಕೆಒಎಫ್ ನಿರ್ದೇಶಕ ಬಾಬುಗೌಡ ಪಾಟೀಲ, ಗ್ರಾಪಂ ಸದಸ್ಯ ಸುರೇಶ ನಾಯ್ಕರ ಇತರರಿದ್ದರು.
ಡಂಬಳದಲ್ಲಿ ವ್ಯಾಪಾರಸ್ಥರ ಬೆಂಬಲ
ಡಂಬಳ: ಸಂಪೂರ್ಣ ಲಾಕ್ಡೌನ್ಗೆ ಡಂಬಳ ಹೋಬಳಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಗ್ರಾಮದ ಎಲ್ಲ ದಿನಸಿ ಅಂಗಡಿ, ಹೋಟೆಲ್ಗಳನ್ನು ಬೆಳಗ್ಗೆ 8 ಗಂಟೆಗೆ ಸ್ವಯಂಪ್ರೇರಣೆಯಿಂದ ಬಂದ್ ಮಾಡಲಾಗಿತ್ತು. ನಿತ್ಯ ಕೆಲ ಗಂಟೆ ಕಾಲ ದಿನಸಿ ಅಂಗಡಿಗಳನ್ನು ತೆರೆಯಲಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರೈತರು, ಕೂಲಿ ಕಾರ್ವಿುಕರು, ಜನರು ಮಾಸ್ಕ್ ಧರಿಸಿ ಕೃಷಿ ಚಟುವಟಿಕೆ ಹಾಗೂ ನಿತ್ಯ ಕಾರ್ಯಗಳಲ್ಲಿ ತೊಡಗಿದ್ದು ಕಂಡು ಬಂತು.