ಸಂಪೂರ್ಣ ಜಿಲ್ಲೆಯನ್ನು ಬರ ಎಂದು ಘೋಷಿಸಿ: ಅ.9ರಿಂದ ಪ್ರತಿಭಟನೆ

ಸಂಪೂರ್ಣ ಜಿಲ್ಲೆಯನ್ನು ಬರ ಎಂದು ಘೋಷಿಸಿ: ಅ.9ರಿಂದ ಪ್ರತಿಭಟನೆ
Published on

    ಹಾಸನ:  ಜಿಲ್ಲೆಯಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲ ಆವರಿಸಿದೆ. ಸರ್ಕಾರ ತಕ್ಷಣವೇ ಎಲ್ಲಾ ತಾಲೂಕುಗಳನ್ನು ಬರಪಟ್ಟಿಗೆ ಸೇರಿಸಬೇಕು. ಇಲ್ಲವಾದರೆ ಅ.9ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಕಟದ ಅಧ್ಯಕ್ಷ ಸಿಡಿ ಮನುಕುಮಾರ್ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಇತ್ತೀಚೆಗೆ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಅದರಲ್ಲಿ 161 ತೀವ್ರ ಬರಪೀಡಿತ, 24 ಸಾಧಾರಣ ಬರ ಪಟ್ಟಿಗೆ ಸೇರಿಸಿದೆ. ಇದರಲ್ಲಿ ಅರಕಲಗೂಡು ತೀವ್ರ ಬರಗಾಲದ ಪಟ್ಟಿಯಲ್ಲಿದ್ದರೆ, ಸಕಲೇಶಪುರ, ಹೊಳೆನರಸೀಪುರ, ಚನ್ನರಾಯಪಟ್ಟಣ, ಬೇಲೂರು ತಾಲೂಕುಗಳು ಸಾಧಾರಣ ಪಟ್ಟಿಯಲ್ಲಿವೆ. ಆದರೆ ಅರಸೀಕೆರೆ, ಹಾಸನ ಹಾಗೂ ಆಲೂರು ತಾಲೂಕುಗಳನ್ನು ಕೈ ಬಿಟ್ಟು ನಿರ್ಲಕ್ಷೃ ಮಾಡಲಾಗಿದೆ. ಇವುಗಳನ್ನು ಕೂಡ ಬರ ಪಟ್ಟಿಗೆ ಸೇರಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಬರಪೀಡಿತ ತಾಲೂಕುಗಳ ಘೋಷಣೆಯಲ್ಲಿ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ನಿರ್ಲಕ್ಷೃ ವಹಿಸಿದ್ದರಿಂದ ಈ ರೀತಿ ಆಗಿದೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತುಕೊಂಡು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಂಗಾರು ಕೈ ಕೊಟ್ಟಿರುವುದರಿಂದ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ ಭರ್ತಿಯಾಗಿಲ್ಲ. ಆದರೆ ಇದ್ದ ನೀರನ್ನು ಜಿಲ್ಲೆಯ ಜನರಿಗೆ ಕೊಡದೆ ತಮಿಳುನಾಡಿಗೆ ಹರಿಸಿದರು. ಇದರಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಆದ್ದರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ . ರಾಜಣ್ಣ ಅವರು ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿದ್ದರೂ ಕೂಡ ಅವರು ಜಿಲ್ಲೆಗೆ ಆಗಮಿಸದೆ ಕಾಣೆಯಾಗಿದ್ದಾರೆ. ಆರಂಭದಲ್ಲಿ ಸಭೆ ನಡೆಸಿ ನಂತರ ನಾಪತ್ತೆಯಾಗಿದ್ದಾರೆ. ಹಾಸನಂಬ ಜಾತ್ರಾ ಮಹೋತ್ಸವ ಸೇರಿದಂತೆ ಇನ್ನಿತರೆ ಪೂರ್ವಸಿದ್ಧತೆಗಳು ಆಗಬೇಕಾಗಿದೆ. ಅವರ ಅನುಪಸ್ಥಿತಿಯಿಂದ ಸಿದ್ಧತೆಗೆ ಹಿನ್ನಡೆ ಉಂಟಾಗುತ್ತಿದೆ. ತಕ್ಷಣವೇ ಸರ್ಕಾರ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕರವೇ ಪದಾಧಿಕಾರಿಗಳಾದ ಶಿವಣ್ಣ ಗೌಡ, ಮಧು, ತನುಗೌಡ, ಸೀತಾರಾಮ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net