

ತಿ.ನರಸೀಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್.ಅಶ್ವತ್ಥನಾರಾಯಣ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ ವಿದ್ಯೋದಯ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಖಾಸಗಿ ಬಸ್ ನಿಲ್ದಾಣದ ಬಳಿ ಸಮಾವೇಶ ಗೊಂಡಿತು. ಬಳಿಕ ಮಾನವ ಸರಪಳಿ ರಚಿಸಿ ಸಷಿಚರ ಪ್ರತಿಕೃತಿಯನ್ನು ದಹಿಸಲಾಯಿತು. ನಂತರ ತಾಲೂಕು ಕಚೇರಿ ತಲುಪಿ ತಹಸೀಲ್ದಾರ್ ಸಿ.ಜಿ.ಗೀತಾ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಸಂತೃಪ್ತಿ ಕುಮಾರ್ ಮಾತನಾಡಿ, ವಿರೋಧ ಪಕ್ಷದ ನಾಯಕರ ವಿರುದ್ಧ ಸಚಿವರೊಬ್ಬರು ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಸರ್ಕಾರ ಕೈಕಟ್ಟಿ ಕುಳಿತಿದೆ. ಈ ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಅಲ್ಲದೆ ಪೊಲೀಸ್ ಇಲಾಖೆ ಸ್ವಯಂ ದೂರು ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.
ಪುರಸಭೆಯ ನಿಕಟಪೂರ್ವ ಅಧ್ಯಕ್ಷ ಎಸ್.ಮದನ್‌ರಾಜ್ ಮಾತನಾಡಿ, ಸಚಿವರ ವಿರುದ್ಧ ಕೊಲೆ ಬೆದರಿಕೆ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಡಿಸಿಸಿ ವಕ್ತಾರ ಹುಣಸೂರು ಬಸವಣ್ಣ ಮಾತನಾಡಿ, ಸಿದ್ದರಾಮಯ್ಯ ಒಂದು ಸಮುದಾಯದ ನಾಯಕರಲ್ಲ. ಬದಲಾಗಿ ರಾಜ್ಯದ ಜನರ ಅಸ್ತಿ. ಅವರನ್ನು ತಾರ್ಕಿಕವಾಗಿ ಎದುರಿಸಲಾಗದ ಬಿಜೆಪಿ ಸಮೂಹ ಟೀಕೆ ಟಿಪ್ಪಣಿ ಮುಖೇನ ಅವರ ಮನೋಸ್ಥೈರ್ಯ ಕುಂದಿಸುವ ಕೆಲಸಕ್ಕೆ ಕೈಹಾಕಿದೆ ಎಂದರು.
ಕುರುಬರ ಸಂಘದ ತಾಲೂಕು ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಮಾಜಿ ಅಧ್ಯಕ್ಷರಾದ ಬಸವಣ್ಣ, ಪ್ರಶಾಂತ್ ಬಾಬು, ಪುರಸಭಾ ಅಧ್ಯಕ್ಷ ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಸೋಮು, ಕಾರ್ಯದರ್ಶಿ ಕೊತ್ತೆಗಾಲ ಬಸವರಾಜು, ಜಿಲ್ಲಾ ಸಂಚಾಲಕ ಶಿವಕುಮಾರ್, ಪುರಸಭಾ ಸದಸ್ಯರಾದ ಬಾದಾಮಿ ಮಂಜು, ಮೆಡಿಕಲ್ ನಾಗರಾಜು, ಗ್ರಾಪಂ ಸದಸ್ಯ ರಾಮನಂಜಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ಅಮ್ಜದ್ ಖಾನ್, ಆಲಗೂಡು ಶಿವಕುಮಾರ್, ಉಕ್ಕಲಗೆರೆ ಬಸವಣ್ಣ,ದೊಡ್ಡೇಬಾಗಿಲು ಮಲ್ಲಿಕಾರ್ಜುನ ಸ್ವಾಮಿ, ಗೋಪಾಲ್ ರಾಜ್, ವೆಂಕಟೇಶ್, ಅರುಣ್ ಗೌಡ, ಹಾಳೇಗೌಡ, ಕಲ್ಪನಾ ಮತ್ತಿತರರು ಇದ್ದರು.