ಸಂಪುಟ ಸರ್ಜರಿ & ಸಚಿವರಾಗುವರೇ ಸಿಪಿವೈ? :ಡಿಕೆಶಿ, ಎಚ್​ಡಿಕೆ ಪೈಪೋಟಿ ನಡುವೆ ಪ್ರಬಲ ನಾಯಕನ ಅಗತ್ಯ

18-cp-yogeshwar600
Published on

ಗಂಗಾಧರ್​ ಬೈರಾಪಟ್ಟಣ ರಾಮನಗರ

ಕೇಂದ್ರ ಗೃಹ ಸಚಿವ ಅಮಿತ್​ಷಾ ರಾಜ್ಯಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಸಚಿವ ಸಂಪುಟ ಸರ್ಜರಿ ಮುನ್ನೆಲೆಗೆ ಬಂದಿದೆ. ವಿಧಾನ ಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್​ ಅವರಿಗೆ ಕೈತಪ್ಪಿರುವ ಅವಕಾಶ ಮತ್ತೆ ಕೈ ಸೇರಲಿದೆ ಎನ್ನುವ ವಿಚಾರ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದ ಯೋಗೇಶ್ವರ್​, ನಂತರ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ನಿರಂತರ ಯತ್ನ ನಡೆಸುತ್ತಲೇ ಇದ್ದಾರೆ. ಆದರೆ ಇದುವರೆಗೂ ಮಂತ್ರಿ ಸ್ಥಾನ ಕೊಡುವ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆಗಳು ನಡೆದಿರಲಿಲ್ಲ. ಇದೀಗ ಕೇಂದ್ರ ಗೃಹ ಸಚಿವ ಅಮಿತ್​ಷಾ ತುಮಕೂರಿಗೆ ಬಂದಿದ್ದ ವೇಳೆ ಅವರನ್ನು ಭೇಟಿ ಮಾಡಿದ್ದ ಯೋಗೇಶ್ವರ್​ ಅವರಿಗೆ ಮಂತ್ರಿ ಸ್ಥಾನದ ಭರವಸೆ ದೊರೆತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಹಳೇ ಮೈಸೂರಿಗೆ ಯಾರು?: ಬೆಂಗಳೂರಿನಲ್ಲಿ ಕೋರ್​ ಕಮಿಟಿ ಸಭೆ ನಡೆಸಿದ್ದ ಅಮಿತ್​ಷಾ, ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಒತ್ತು ನೀಡುವಂತೆ ಖಡಕ್​ ಸೂಚನೆ ನೀಡಿದ್ದರು. ಈ ಭಾಗದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ನೇರ ಹಣಾಹಣಿಯಿದ್ದು, ಬಿಜೆಪಿ ಸಂಟನೆಯ ವೈಲ್ಯದಿಂದ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಈ ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದ್ದು, ದೇವೇಗೌಡರ ಕುಟುಂಬ ಮತ್ತು ಡಿ.ಕೆ.ಶಿವಕುಮಾರ್​ ಈ ಭಾಗದ ಒಕ್ಕಲಿಗ ನಾಯಕರಾಗೇ ಗುರುತಿಸಿಕೊಂಡಿದ್ಧಾರೆ. ಇದರ ಹೊರತಾಗಿಯೂ ಬಿಜೆಪಿಗೆ ಒಬ್ಬ ಪ್ರಬಲ ಒಕ್ಕಲಿಗ ನಾಯಕನ ಅಗತ್ಯವಿದ್ದು, ಈ ಸ್ಥಾನವನ್ನು ಯೋಗೇಶ್ವರ್​ ಅವರು ತುಂಬುವ ಶಕ್ತಿ ಹೊಂದಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಈ ಬಾರಿ ಸಂಪುಟ ಸರ್ಜರಿಯಲ್ಲಿ ಸಿಪಿವೈಗೆ ಸ್ಥಾನ ದೊರೆಯಲಿದೆ ಎನ್ನುವುದು ಅವರ ಅಭಿಮಾನಿಗಳ ವಾದ.

ದೊರೆಯುವುದೇ ಸ್ಥಾನ? ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದರ ಹಿಂದೆ ಸಿ.ಪಿ.ಯೋಗೇಶ್ವರ್​ ಪಾತ್ರವೂ ಹಿರಿದು. ಇದಕ್ಕೆ ಪ್ರತಿಲ ಎಂಬಂತೆ ಯಡಿಯೂರಪ್ಪ ಅವರು ಯೋಗೇಶ್ವರ್​ ಅವರನ್ನು ವಿಧಾನ ಪರಿಷತ್​ ಸದಸ್ಯರನ್ನಾಗಿ ಮಾಡುವ ಜತೆಗೆ ಮಂತ್ರಿಗಿರಿ ನೀಡಿದ್ದರು. ಆದರೆ ನಂತರ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಯಡಿಯೂರಪ್ಪ ಅವರ ಪದಚ್ಯುತಿವರೆಗೂ ಎಳೆದು ತಂದಿತು. ಇದರ ಪರಿಣಾಮವಾಗಿ ಯೋಗೇಶ್ವರ್​ ಅವರು ಬಸವರಾಜ ಬೊಮ್ಮಾಯಿ ಅವರ ಮಂತ್ರಿ ಮಂಡಲದ ಸದಸ್ಯರಾಗಿ ಉಳಿಯಲು ಸಾಧ್ಯವಾಗಲೇ ಇಲ್ಲ ಎನ್ನುವುದು ನಗ್ನ ಸತ್ಯ. ಆದರೆ, ಈಗ ಮತ್ತೆ ನಡೆಯುವ ಸಂಪುಟ ಸರ್ಜರಿಯಲ್ಲಿ ಯೋಗೇಶ್ವರ್​ ಅವರಿಗೆ ಮಂತ್ರಿ ಸ್ಥಾನ ದೊರೆಯುತ್ತದೆ ಎನ್ನುವ ವಿಶ್ವಾಸ ಸಿಪಿವೈ ಅಭಿಮಾನಿಗಳಲ್ಲಿ ಇದೆಯಾದರೂ, ನಿಜವಾಗಲೂ ಇದು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡಿದೆ. ಲಭ್ಯ ಮಾಹಿತಿ ಪ್ರಕಾರ ಪ್ರಸ್ತುತ ಸನ್ನಿವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ವಿರುದ್ಧ ಹಳೇ ಮೈಸೂರು ಭಾಗದಲ್ಲಿ ಹೋರಾಡುವ ಶಕ್ತಿ ಯೋಗೇಶ್ವರ್​ ಹೊರತಾಗಿ ಇನ್ಯಾವ ಬಿಜೆಪಿ ನಾಯಕರಿಗೂ ಇಲ್ಲ ಎನ್ನುವುದನ್ನು ಮನಗಂಡು ಪಕ್ಷ ಸಂಟನೆ ದೃಷ್ಟಿಯಿಂದ ಯೋಗೇಶ್ವರ್​ ಅವರಿಗೆ ಮಂತ್ರಿ ಸ್ಥಾನ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಅಲ್ಲಿಂದ ಅನುಮೋದನೆ ಪಡೆದ ಪಟ್ಟಿ ಬಿಡುಗಡೆ ಮಾಡಿದ ನಂತರವಷ್ಟೇ ಎಲ್ಲವೂ ಸ್ಪಷ್ಟವಾಗಲಿದೆ ಎನ್ನುವುದಕ್ಕೆ ಹಿಂದಿನ ಹಲವು ಟನೆಗಳು ಉದಾಹರಣೆಯಾಗಿವೆ.

ಹಾಲಿ ಮೂರು ಸಚಿವರು :

ಪ್ರಸ್ತುತ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ರಾಮನಗರ ಜಿಲ್ಲೆ ಮೂಲದ ಮೂವರು ಮಂತ್ರಿಗಳಾಗಿದ್ದಾರೆ. ಮಾಗಡಿಯ ಚಿಕ್ಕಕಲ್ಯಾ ಗ್ರಾಮದ ಡಾ.ಸಿ.ಎನ್​.ಅಶ್ವತ್ಥ ನಾರಾಯಣ ಉನ್ನತ ಶಿಕ್ಷಣ ಸಚಿವರಾಗಿದ್ದರೆ, ಕನಕಪುರದ ಯಲವನಾಥದ ವಿ.ಸೋಮಣ್ಣ ವಸತಿ ಸಚಿವ, ಚನ್ನಪಟ್ಟಣದ ಶೆಟ್ಟಿಹಳ್ಳಿ ಗ್ರಾಮದ ಎಸ್​.ಟಿ.ಸೋಮಶೇಖರ್​ ಸಹಕಾರ ಸಚಿವರಾಗಿದ್ದಾರೆ. ಇವರಲ್ಲಿ ಅಶ್ವತ್ಥನಾರಾಯಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದರೂ ಕಳೆದ 2&3 ತಿಂಗಳಿಂದ ಇವರ ಗಮನ ಮಾಗಡಿ ಹೊರತಾಗಿ ಬೇರೆ ಕಡೆಗೆ ಸಾಗುತ್ತಿಲ್ಲ. ಇನ್ನು ಸಚಿವ ವಿ.ಸೋಮಣ್ಣ ಹಲವಾರು ಬಾರಿ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದರೂ, ಇದು ಕನಕಪುರ, ಮುದವಾಡಿ, ಯಲವನಾಥ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಆದರೆ, ಸೋಮಶೇಖರ್​ ಮಾತ್ರ ಜಿಲ್ಲೆಯ ಭೇಟಿಗೆ ಹೆಚ್ಚಿನ ಒಲವು ತೋರಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net