

ಹಾಸನ: ಸೆ. 26ರಿಂದ ಮೂರು ದಿನಗಳ ಕಾಲ ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಶಾಖಾಮಠದಲ್ಲಿ ನಡೆದ ಯುಗಯೋಗಿ,ಪದ್ಮಭೂಷಣ,ಭೈರವೈಕ್ಯ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕ ಸುವರ್ಣ ಸಂಪೂರ್ತಿ ಮಹೋತ್ಸವ ಶನಿವಾರ ಸಂಪನ್ನಗೊಂಡಿತು.
ಶನಿವಾರ ರಾತ್ರಿ ಶ್ರೀ ಮಠದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಪ್ಪತ್ತೆರಡನೇ ಪೀಠಾಧ್ಯಕ್ಷರಾಗಿದ್ದ ಜಗದ್ಗುರು,ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ನಿಷ್ಕಾಮ ಕರ್ಮಯೋಗಿಗಳು. ಶ್ರೀಗಳು ಶ್ರೀ ಮಠದ ಸಿದ್ದಸಿಂಹಾಸನವನ್ನೇರಿದ ಆ ಅಮೃತ ಘಳಿಗೆ ಹೊಸ ಮನ್ವಂತರಕ್ಕೆ ನಾಂದಿಯಾಯಿತು ಎಂದರು.
ಸಮಾಜವನ್ನು ಸದೃಢಗೊಳಿಸುವ ಸಂಕಲ್ಪ ತೊಟ್ಟ ಶ್ರೀಗಳು ಅದಕ್ಕಾಗಿ ಅನ್ನ,ಅಕ್ಷರ,ಆರೋಗ್ಯವನ್ನು ಮೂಲ ಮಂತ್ರವಾಗಿಸಿಕೊಂಡು ನಾಡಿನ ರೈತರು,ದೀನ,ದಲಿತರ ಪರವಾಗಿ ನಿಂತು ಗಣನೀಯ ಸಾಧನೆ ಸಲ್ಲಿಸಿದರು. ಗ್ರಾಮೀಣರು ವಿದ್ಯಾವಂತರಾಗದ ಹೊರತು ಅವರ ಉದ್ದಾರ ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ಶ್ರೀಗಳು ಶೈಕ್ಷಣಿಕ ಕ್ರಾಂತಿಯನ್ನೆ ಮಾಡಿದರು ಎಂದು ತಿಳಿಸಿದರು.
ಜಾತಿ-ಧರ್ಮ ಯಾವುದನ್ನು ಲೆಕ್ಕಿಸದ ಮಾತೃ ಹೃದಯದ ಶ್ರೀಗಳು ವಿವಿಧ ಜಾತಿ-ಧರ್ಮಗಳ ಮಠ,ಮಾನ್ಯಗಳಿಗೆ ಬೆನ್ನೆಲುಬಾಗಿ ನಿಂತು ಸಹಾಯ ಮಾಡಿದರು. ಪರಿಸರ ಕಾಳಜಿ ಹೊಂದಿದ್ದ ಶ್ರೀಗಳು ಕೋಟ್ಯಾಂತರ ಸಸಿ ನೆಡಲು ಕಾರಣಿಭೂತರಾದರು.ಕೆರೆ-ಕಟ್ಟೆ ನಿರ್ಮಾಣ ಮಾಡಿ ರೈತರಿಗೆ ಸಹಕರಿಸಿದರು. ಧರ್ಮಪ್ರಚಾರ ಮಾಡಿ ಧರ್ಮ ಪ್ರಭುವಾದರು. ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ದಾಸೋಹದಲ್ಲಿ ಇಡೀ ದೇಶಕ್ಕೆ ಮಾದರಿಯಾಗುವಂತಹ ಕಾರ್ಯ ಮಾಡಿದರು ಎಂದರು.
ಬಾಗಲಕೋಟೆಯ ಅನುವಾಲ ಮಠದ ಶ್ರೀ ಕೈಲಾಸನಾಥ ಸ್ವಾಮೀಜಿ ಮಾತನಾಡಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಈ ನಾಡು ಕಂಡ ಯುಗಯೋಗಿ ಎಂಬುದು ಸತ್ಯವಾದ ಮಾತು. ಧರ್ಮ ಪ್ರವರ್ಧನೆಗಾಗಿ,ಸಮಾಜದಲ್ಲಿ ನೊಂದವರ ನೆರವಿಗಾಗಿ ನಾಡಿನಾದ್ಯಂತ ಮಠದ ಶಾಖೆಗಳನ್ನು ತೆರೆದು ನೊಂದವರಿಗೆ ಸಹಾಯ ಹಸ್ತ ಚಾಚಿದರು ಎಂದರು.
ಹಿರಿಸಾವೆ ಸಾಯಿ ಮಂದಿರದ ಗುರುಮೂರ್ತಿ ಗುರೂಜಿ ಮಾತನಾಡಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆರೋಗ್ಯ ಕ್ಷೀಣಿಸಿದ ಸಂದರ್ಭದಲ್ಲೂ ಕೂಡ ಅವರು ಸಮಾಜದ ಪರವಾದ ಆಲೋಚನೆಗಳನ್ನು ನಿಲ್ಲಿಸಲಿಲ್ಲ. ಶ್ರೀಗಳು ಮಾಡಿರುವ ಕೆಲಸಗಳು ಎಂದೆಂದಿಗೂ ಜನರು ಅವರನ್ನು ನೆನೆಸುವಂತೆ ಮಾಡಿವೆ. ಅವರು ರೂಢಿಸಿಕೊಂಡ ವ್ಯಕ್ತಿತ್ವ,ಸಮಾಜದ ಪರವಾದ ಕಾಳಜಿ ಅವರನ್ನು ಯುಗಯೋಗಿಯನ್ನಾಗಿಸಿತು ಎಂದರು.
ಕಬ್ಬಳಿಯ ಶ್ರೀ ಶಿವಪುತ್ರನಾಥ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಬಿಜಿಎಸ್ ನೃತ್ಯ ವೈಭವ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಇದೇ ವೇಳೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪಟ್ಟಾಭಿಷೇಕ ಸುವರ್ಣ ಸಂಪೂರ್ತಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಮಹನೀಯರು,ಮಠದ ಸಿಬ್ಬಂದಿ ವರ್ಗ,ಸ್ವಚ್ಚತಾ ಕಾರ್ಯ ನೆರವೇರಿಸಿದ ಮಹಿಳೆಯರನ್ನು ಶ್ರೀ ಶಂಭುನಾಥ ಸ್ವಾಮೀಜಿಯರು ಗೌರವಿಸಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ದಸರಿಘಟ್ಟ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ,ಶ್ರೀ ರಾಮಚಂದ್ರಪ್ಪ ಮೇತ್ರಿ, ಶ್ರೀ ರಮಾನಂದ ಸ್ವಾಮೀಜಿ, ಖಾಸಗೀ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಈ ಶಿವರಾಮೇಗೌಡ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ, ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಎಚ್.ಬಿ ಮದನಗೌಡ, ಕಣದಹಳ್ಳಿ ಮಂಜೇಗೌಡ,ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ ನಾಗರಾಜು, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ, ಸೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಂ.ಡಿ.ನಾಗೇಶ್‌ಇತರರು ಇದ್ದರು,