

ಪಾಂಡವಪುರ: ಮನೆಯ ಜಂಜಾಟದಿಂದ ಮುಕ್ತರಾಗಬೇಕಾದರೆ ಮಠಗಳಿಗೆ ಬರಬೇಕು. ಮಠದಲ್ಲಿ ದೇವರ ಸಾನ್ನಿಧ್ಯ ಸಿಗುವ ಜತೆಗೆ, ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಮರಿದೇವರು ಶಿವಯೋಗಿ ಸ್ವಾಮೀಜಿ ಅವರ 15ನೇ ಹಾಗೂ ಸದಾಶಿವ ಸ್ವಾಮೀಜಿ ಅವರ 5ನೇ ವರ್ಷದ ಪುಣ್ಯಸ್ಮರಣೆ, ಪೂಜ್ಯರ ಗದ್ದುಗೆ ಉದ್ಘಾಟನೆ ಮತ್ತು ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಧರ್ಮ, ಸಾತ್ವಿಕತೆ, ಪ್ರೀತಿ, ವಿಶ್ವಾಸ ಸದಾ ನೆಮ್ಮದಿ ನೀಡುತ್ತದೆ. ಪ್ರಪಂಚದಲ್ಲಿ ತಪ್ಪು ಮಾಡದೆ ಯಾರೂ ಬದುಕಲು ಸಾಧ್ಯವಿಲ್ಲ. ಆದರೆ, ತಪ್ಪನ್ನು ತಿದ್ದಿಕೊಂಡು ಬದುಕಬೇಕು. ಅದಕ್ಕೆ ಧರ್ಮ ಸಹಾಯ ಮಾಡುತ್ತದೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ದೇವಸ್ಥಾನ, ಮಠಗಳು ಜನರಲ್ಲಿ ನಂಬಿಕೆ, ವಿಶ್ವಾಸ ಮೂಡಿಸುತ್ತವೆ. ಸಂಪತ್ತು ಇದ್ದಾಗ ಊರೆಲ್ಲ ನೆಂಟರು, ಇಲ್ಲದಿದ್ದಾಗ ಯಾರೂ ಇರುವುದಿಲ್ಲ ಎಂದು ಹೇಳಿದರು.
ಮೈಸೂರು ಒಡೆಯರ ತ್ಯಾಗದ ಪ್ರತಿಫಲವನ್ನು ಮಂಡ್ಯ ಜನರು ಅನುಭವಿಸುತ್ತಿದ್ದಾರೆ. ಮೈಸೂರು ಅರಸರು ಆಭರಣಗಳನ್ನು ಮಾರಾಟ ಮಾಡಿ ಕೆಆರ್‌ಎಸ್ ಅಣೆಕಟ್ಟೆ ಕಟ್ಟಿಸಿದ್ದಾರೆ. ಜನರ ಕಲ್ಯಾಣ ಮುಖ್ಯವೆಂದು ತ್ಯಾಗ ಮಾಡಿದ ಫಲದಿಂದ ಮಂಡ್ಯ ಜಿಲ್ಲೆಯ ಭೂಮಿ ಹಸಿರಾಗಿದೆ. ಸಂಪತ್ತು ಬಂದಾಗ ಸದುಪಯೋಗಪಡಿಸಿಕೊಳ್ಳಬೇಕು. ಹಣ ಬಂದ ಮೇಲೆ ಕೆಟ್ಟ ಆಲೋಚನೆಗೆ ಮನಸ್ಸನ್ನು ಹರಿಯಗೊಡಬಾರದು ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಮಾತನಾಡಿ, ಮೇಲುಕೋಟೆ, ಬೇಬಿಬೆಟ್ಟ ಹಾಗೂ ಮೈಸೂರು ಅರಮನೆಗೆ ನಿಕಟ ಸಂಬಂಧವಿದೆ. ನಮ್ಮ ವಂಶದ ಪೂರ್ವಿಕರು ಇಲ್ಲಿಂದಲೇ ಮೈಸೂರಿಗೆ ಬಂದರು. ವೀರಶೈವ ಹಾಗೂ ಅರಮನೆ ಪರಂಪರೆಗೆ ವ್ಯತ್ಯಾಸವಿಲ್ಲ. ಅರಮನೆ ಪರಂಪರೆ ವೀರಶೈವ ಮೂಲದಿಂದ ಬಂದಿದೆ. ರಾಮಯೋಗೀಶ್ವರ ಮಠದಿಂದ ಶಿಕ್ಷಣ ಸಂಸ್ಥೆ ಆರಂಭಿಸಲು ಜಮೀನು ನೀಡುವಂತೆ ಮಾಡಿರುವ ಮನವಿಗೆ ತಾಯಿ ಪ್ರಮೋದಾದೇವಿ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಮರಿದೇವರು ಶಿವಯೋಗಿ ಸ್ವಾಮೀಜಿ ಅವರು ಕಾಡಿನಂತಿದ್ದ ಬೇಬಿ ಬೆಟ್ಟಕ್ಕೆ ಬಂದು ನೂರಾರು ವರ್ಷಗಳ ಕಾಲ ತಮ್ಮ ಬದುಕನ್ನು ಸಮಾಜಕ್ಕೆ ಅರ್ಪಣೆ ಮಾಡಿ ಜನತೆಗೆ ಒಳಿತು ಬಯಸಿದ್ದರು. ಅವರಿಗೆ ಬೇಕು ಎನ್ನುವ ಅಪೇಕ್ಷೆ ಇರಲಿಲ್ಲ. ಅವರಿಗೆ ಭಕ್ತರು, ಮಠ ಮುಖ್ಯವಾಗಿತ್ತು. ನಂತರ ಬಂದ ಸದಾಶಿವ ಸ್ವಾಮೀಜಿ ಕೂಡ ದೇಹದ ನೋವನ್ನು ಲೆಕ್ಕಿಸದೆ ಭಕ್ತರ ಮನೆಗಳಿಗೆ ತೆರಳಿ ದೇವರ ಸೇವೆ ಮಾಡುತ್ತಿದ್ದರು ಎಂದರು.
ರಾಜ್ಯದ ಶೈಕ್ಷಣಿಕ ಪ್ರಗತಿಯಲ್ಲಿ ಮಠಮಾನ್ಯಗಳ ಪಾತ್ರ ಮಹತ್ವದ್ದಾಗಿದೆ. ಹೊಟ್ಟೆಯ ಹಸಿವು ನೀಗಿಸಿದರೆ ನೆತ್ತಿಯ ಹಸಿವನ್ನು ಹೋಗಲಾಡಿಬಹುದೆಂದು ನೂರಾರು ವರ್ಷಗಳ ಹಿಂದೆಯೇ ಮಠಗಳು ತೋರಿಸಿಕೊಟ್ಟಿವೆ. ಸರ್ಕಾರಗಳು ಈಗ ಅದನ್ನೇ ಅನುಸರಿಸುತ್ತಿವೆ. ಬಸವಣ್ಣನವರ ವಚನದಲ್ಲಿ ಯಾವುದು ಬೇಕು, ಯಾವುದು ಬೇಡವೆಂದು ತಿಳಿಸಿದ್ದಾರೆ. ಅದನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಆದರೆ ನಾವು ಬೇಕು ಎನ್ನುವುದನ್ನು ಬಿಟ್ಟು ಬೇಡವೆಂದು ಹೇಳಿರುವುದನ್ನು ಆರಿಸಿಕೊಳ್ಳುತ್ತಿದ್ದೇವೆ. ಬಸವಣ್ಣನವರ ತತ್ವ, ವಿಚಾರಗಳು ಉತ್ತಮ ಜೀವನ ನಡೆಸಲು ಸಹಕಾರಿಯಾಗಿವೆ ಎಂದು ಹೇಳಿದರು.
ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ, ದೇಗುಲ ಮಠದ ಚನ್ನಬಸವ ಸ್ವಾಮೀಜಿ, ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಬಿಜೆಪಿ ಮುಖಂಡ ಡಾ.ಇಂದ್ರೇಶ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ನಿರಂಜನ್‌ಬಾಬು, ಮಾಜಿ ಅಧ್ಯಕ್ಷ ಎಸ್.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕಿ ಎಸ್.ರೇಣುಕಾ ರಾಜು, ಚಿಕ್ಕವೀರಪ್ಪ, ರತ್ನಮ್ಮ ಇತರರು ಇದ್ದರು.