

ಆನಂದಪುರ: ಸಂಪತ್ತನಿಂದ ಸುಖ ಸಿಗುತ್ತದೆ ಎಂಬುದು ಭ್ರಮೆ. ಪೂಜೆ, ದಾನ, ಧರ್ಮದಿಂದ ಮನ ಶಾಂತಿ ದೊರೆಯುತ್ತದೆ ಎಂದು ರಂಭಾಪುರಿ ಖಾಸಾ ಶಾಖಾ ಮಠವಾದ ಮಳಲಿಮಠದ ಶ್ರೀ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸೋಮವಾರ ಇಲ್ಲಿಗೆ ಸಮೀಪದ ಕೆಂಜಗಾಪುರದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಮಾಸ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇವರನ್ನು ನಿಷ್ಕಾಮ ಭಕ್ತಿಯಿಂದ ಪೂಜಿಸಿಬೇಕು. ಬದುಕಿನಲ್ಲಿ ನಾವು ಪಡೆದ ಆಸ್ತಿ, ಹಣ ಇತ್ಯಾದಿ ಎಲ್ಲ ಸಂಪತ್ತು ಸಹ ದೇವರ ದಯೆಯೇ ಆಗಿದೆ. ಸರಳ ಬದುಕು ನಡೆಸಲು ಅಗತ್ಯ ಸಂಪತ್ತು ಉಳಿಸಿಕೊಂಡು ಮಿಕ್ಕವನ್ನು ದಾನ, ಧರ್ಮ ಮತ್ತು ಬಡವರ ಬದುಕಿಗೆ ಸಹಾಯ ಮಾಡಲು ಬಳಸಿ ಕೃತಾರ್ಥರಾಗಬೇಕು ಎಂದರು.
ಮುಜರಾಯಿ ಸಮಿತಿ ಅಧ್ಯಕ್ಷ ಕರಡಿಮನೆ ಅರುಣ್ ಕುಮಾರ ಗೌಡ, ಮುಜರಾಯಿ ಸಮಿತಿಯ ಪ್ರಮುಖರಾದ ಬೆಳಕೋಡು ಹಾಲಸ್ವಾಮಿ ಗೌಡ, ಚೇತನ, ವಿಷ್ಣು, ಬಂಗಾರಪ್ಪ, ನಾಗರಾಜ್, ಪಲ್ಲವಿ, ನಾಗರತ್ನಾ, ದೇವಾಲಯದ ಪ್ರಧಾನ ಅರ್ಚಕ ಗಂಗಾಧರಪ್ಪ, ಪ್ರಮುಖರಾದ ಶಾಂತಕುಮಾರ ಗೌಡ ಆಚಾಪುರ, ಮಾಣಿಕೆರೆ ಪ್ರಕಾಶ, ಕೆರೆಹಿತ್ತಲು ಗಿರೀಶ, ಸೋಮಶೇಖರ ಕೆಂಜಗಾಪುರ ಇತರರಿದ್ದರು.