

ವಿಜಯವಾಣಿ ಸುದ್ದಿಜಾಲ ಧಾರವಾಡ
ಭೂಲೋಕದ ಮಹಾನ್ ಚಕ್ರವರ್ತಿ ನಹುಶ ಇಂದ್ರನ ಪದವಿಗೇರಿದ ಕಥೆಯನ್ನೇ ಮಹಾಕ್ಷತ್ರಿಯ ಕಾದಂಬರಿಯಲ್ಲಿ ಬಣ್ಣಿಸಲಾಗಿದೆ ಎಂದು ಚಿಂತಕ ಡಾ. ಶ್ರೀನಿವಾಸ ವಾಡಪ್ಪಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಗಳಗನಾಥ ನಾ ಶ್ರೀ ರಾಜಪುರೋಹಿತ ಪ್ರತಿಷ್ಠಾನ ವತಿಯಿಂದ ಗುರುವಾರ ಏರ್ಪಡಿಸಿದ್ದ ಗಳಗನಾಥೋತ್ತರ ಕಾದಂಬರಿಗಳ ಕುರಿತ ವಿಚಾರ ಸಂಕಿರಣದಲ್ಲಿ ದೇವುಡು ನರಸಿಂಹಶಾಸ್ತ್ರಿಗಳ ಕಾದಂಬರಿ ಮಹಾಕ್ಷತ್ರಿಯ ಕುರಿತು ಅವರು ಮಾತನಾಡಿದರು.
ಉತ್ಕೃಷ್ಟ ಆಡಳಿತದಿಂದ ಭೂಲೋಕದ ನಹುಶ ಸ್ವರ್ಗಲೋಕದ ಅಧಿಪತಿಯಾಗುವ ಹಂತ, ಎದುರಿಸಿದ ಸಮಸ್ಯೆಗಳನ್ನು ವಿವರಿಸಲಾಗಿದೆ. ನಹುಶ ತನ್ನ ಅಪ್ರತಿಮ ಸಾಧನೆ ಮೂಲಕ ದೇವೇಂದ್ರನ ಪೀಠ ಅಲಂಕರಿಸಿದ. ಧರ್ಮಕ್ಕಾಗಿ ಹುಟ್ಟಿದ ನಹುಶ ಇಂದ್ರನ ಪದವಿ ಪಡೆದ ರೋಚಕ ಕತೆಯಿದು. 60ರ ದಶಕದಲ್ಲಿ ಪ್ರಕಟಗೊಂಡ ಕಾದಂಬರಿ 21ಬಾರಿ ಪ್ರಕಟಗೊಂಡಿದೆ. ಮಹಾಭಾರತದಲ್ಲಿ ಬರುವ ನಹುಶನ ಪಾತ್ರವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಇಡೀ ಕಥೆಯನ್ನು ಪುನರ್ ಸೃಷ್ಟಿಸಲಾಗಿದೆ. ನಹುಶನ ಕಥೆಗೆ ರೋಚಕ ತಿರುವು ನೀಡಿದ್ದು ದೇವುಡು ವಿಶೇಷತೆಯಾಗಿದೆ ಎಂದರು.
ಸಾಹಿತಿ ಶ್ರೀಧರ ಹೆಗಡೆ ಭದ್ರನ್ ಅನಕೃ ಅವರ ಕಾದಂಬರಿ ಸಂಧ್ಯಾರಾಗ ಕುರಿತು ಮಾತನಾಡಿ, ಸಂಧ್ಯಾರಾಗ ಸಾರ್ವಕಾಲಿಕ ಕೃತಿಯಾಗಿದ್ದು, ಈಗಲೂ ಜನಪ್ರಿಯತೆ ಉಳಿಸಿಕೊಂಡಿದ್ದು ವಿಶೇಷ. ಒಳಿತು-ಕೆಡಕು ಸಂಘರ್ಷದಲ್ಲಿ ಕೊನೆಗೆ ಒಳಿತಿಗೆ ಜಯವಾಗುವುದನ್ನು ನಿರೂಪಿಸಲಾಗಿದೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾದರೆ ಕೌಟುಂಬಿಕ ವ್ಯವಸ್ಥೆ ಮೇಲಾಗುವ ಪರಿಣಾಮವನ್ನು ಚಿತ್ರಿಸಲಾಗಿದೆ ಎಂದರು.
ವಿದ್ವಾಂಸ ಡಾ. ಶ್ರೀರಾಮ ಭಟ್ ಮಾತನಾಡಿ, ನಾವು ಸಾಹಿತ್ಯದ ಪರಂಪರೆ ಅವಲೋಕಿಸಿದಾಗ ಮಾತ್ರ ಪರಂಪರೆ ಕಟ್ಟಲು ಸಾಧ್ಯ. ಹಿರಿಯ ಸಾಹಿತಿಗಳ ಕೃತಿಗಳ ಅಧ್ಯಯನ ನಮಗೆ ಮಾರ್ಗದರ್ಶನ ನೀಡುತ್ತದೆ. ಗಳಗನಾಥ, ನಾ. ಶ್ರೀ ರಾಜಪುರೋಹಿತ ಸಾಹಿತ್ಯ ಕಾರ್ಯಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವ ಕೆಲಸವಾಗಬೇಕು ಎಂದರು.
ಪ್ರೊ. ದುಷ್ಯಂತ ನಾಡಗೌಡ, ನರಸಿಂಹರಾವ ಸೋಮಲಾಪುರ, ಮನೋಜಗೌಡ ಪಾಟೀಲ, ಇತರರು ಇದ್ದರು.