

ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಆತ್ಮಸ್ಥೈರ್ಯ ಮತ್ತು ಕಾನೂನಿನ ಮೂಲಕ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ತಜ್ಞ ವಕೀಲರ ತಂಡವನ್ನು ನೇಮಿಸಲಾಗಿದ್ದು ಸಂತ್ರಸ್ತೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ತಿಳಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಐಟಿ ತಂಡ ಉತ್ತಮವಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಐದು ಪ್ರಕರಣಗಳು ದಾಖಲಾಗಿದ್ದು, ಉಳಿದವರು ಯಾವುದೇ ಭಯವಿಲ್ಲದೆ ಮತ್ತು ಅಂಜಿಕೆ ಇಲ್ಲದೆ ದೂರು ನೀಡಬಹುದಾಗಿದೆ. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಮತ್ತು ನಿಮಗೆ ಕಾನೂನಿನ ಮೂಲಕ ನೆರವು ನೀಡುವ ದೃಷ್ಟಿಯಿಂದ ಮಹಿಳಾ ವಕೀಲರ ಪಡೆಯನ್ನು ನೇಮಕ ಮಾಡಲಾಗಿದೆ. ಈ ಪಡೆಯಲ್ಲಿ ಹಿರಿಯ ವಕೀಲೆ ಮೈತ್ರಿ ಸೇರಿದಂತೆ ಇನ್ನು ಹಲವರನ್ನು ನಿಯೋಜಿಸಲಾಗಿದ್ದು, ಇದಕ್ಕೆ ಎಲ್ಲರ ಸಹಕಾರವಿದೆ. ಇವರ ಸಹಾಯವನ್ನು ಪಡೆಯಬಹುದಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇನ್ನೂ ಕೂಡ ಸಾರ್ವಜನಿಕರಲ್ಲಿ ಭಯದ ವಾತಾವರಣ ಇದೆ. ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೆ ಪೊಲೀಸರ ಭಯ ನಿಮಗೆ ಬೇಡ ಎಸ್‌ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತಿದ್ದು ಎಲ್ಲಾ ಸಂತ್ರಸ್ತೆಯರ ಹೆಸರು ಮತ್ತು ದೂರುಗಳು ಸೇರಿದಂತೆ ತನಿಖೆಯ ಪ್ರತಿಯೊಂದು ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಸಂತ್ರಸ್ತೆಯರ ಬೆಂಬಲಕ್ಕೆ ಮಹಿಳಾ ವಕೀಲರ ಸಹಾಯವನ್ನು ಪಡೆಯಬಹುದಾಗಿದೆ. ಅಲ್ಲದೆ ಅವರು ಪ್ರಕರಣ ಮುಗಿಯುವವರೆಗೂ ನಿಮ್ಮ ಜತೆ ಇರಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ಅಖಿಲಾ, ಮೈತ್ರಿ, ವಿನಯ್ ಶ್ರೀನಿವಾಸ್ , ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ, ಪೃಥ್ವಿ ಹಾಜರಿದ್ದರು.