ಸಂತ್ರಸ್ತೆಯರಿಗೆ ‘ಸಖಿ’ಯ ಆಸರೆ, ಹೊಸ ಕಟ್ಟಡದಲ್ಲಿ ಕಾರ್ಯಾರಂಭ, ಕಾನೂನು ನೆರವು, ವೈದ್ಯಕೀಯ ಸೇವೆ ಲಭ್ಯ

81c1d7d9-496c-4a59-91a6-fd2a650e6caf1
Published on

ಬೆಂಗಳೂರು ಗ್ರಾಮಾಂತರ: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಆರೋಗ್ಯ, ವಸತಿ, ಕಾನೂನು ಮತ್ತು ಪೊಲೀಸ್ ನೆರವು, ಆಪ್ತ ಸಮಾಲೋಚನೆ ಸೌಲಭ್ಯಗಳನ್ನು ದೊರಕಿಸಿಕೊಡಲು ದೊಡ್ಡಬಳ್ಳಾಪುರದಲ್ಲಿ 2019ರಲ್ಲಿ ಆರಂಭವಾಗಿರುವ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ವರ್ಷದ ಹಿಂದೆ ಸಾರ್ವಜನಿಕ ಆಸ್ಪತ್ರೆ ಕೊಠಡಿಯೊಂದರಲ್ಲಿ ಆರಂಭವಾಗಿದ್ದ ಕೇಂದ್ರ ಇದೀಗ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದೆ.

ಇತ್ತೀಚಿಗೆ ಸಚಿವ ಹಾಲಪ್ಪ ಬಸಪ್ಪ ಆಚಾರ್ ಹಾಗೂ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಕಟ್ಟಡ ಉದ್ಘಾಟಿಸಿದ್ದರು. 2021-22ನೇ ಸಾಲಿನಲ್ಲಿ ರಾಜ್ಯಾದ್ಯಂತ ಸಖಿ ಒನ್ ಸ್ಟಾಪ್ ಸೆಂಟರ್ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. 30 ಜಿಲ್ಲೆಗಳ ಪೈಕಿ 9 ಜಿಲ್ಲೆಗಳಲ್ಲಿ ಮಾತ್ರ ಕೇಂದ್ರ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

58.28 ಲಕ್ಷ ರೂ. ವೆಚ್ಚ: ದೊಡ್ಡಬಳ್ಳಾಪುರದ ಸಖಿ ಕೇಂದ್ರವನ್ನು ಡಿಎಂಎಫ್ ನಿಧಿಯ 48.68 ಲಕ್ಷ ರೂ., ಜಿಲ್ಲಾ ಖನಿಜ ಪ್ರತಿಷ್ಠಾನದ 9.60 ಲಕ್ಷ ರೂ. ಸೇರಿ ಒಟ್ಟು 58.2811 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಆ್ಯಸಿಡ್ ದಾಳಿ, ಬಾಲ್ಯವಿವಾಹ, ವರದಕ್ಷಿಣೆ ಕಿರುಕುಳ ಸೇರಿ ವಿವಿಧ ರೀತಿಯ ಪ್ರಕರಣಗಳ ಸಂತ್ರಸ್ತರಿಗೆ ಒಂದೇ ಸೂರಿನಡಿ ಪರಿಹಾರ ಸಿಗುತ್ತದೆ.

ಕೌಟುಂಬಿಕ ದೌರ್ಜನ್ಯವೇ ಹೆಚ್ಚು: ಸಖಿ ಕೇಂದ್ರ ಆರಂಭವಾದ ಬಳಿಕ 90 ಕೌಟುಂಬಿಕಪ್ರಕರಣಗಳು, 12 ಲೈಂಗಿಕ ದೌರ್ಜನ್ಯ, ಮಕ್ಕಳ ಮೇಲಿನ ದೌರ್ಜನ್ಯ 14, 2 ಬಾಲ್ಯವಿವಾಹ, ಕಾಣಿಯಾದ 3 ಪ್ರಕರಣಗಳು ದಾಖಲಾಗಿವೆ. ಆ ಎಲ್ಲ ಪ್ರಕರಣಗಳ ಸಂತ್ರಸ್ತರಿಗೆ ಅಗತ್ಯ ನೆರವನ್ನೂ ದೊರಕಿಸಿಕೊಡಲಾಗಿದೆ ಎಂದು ಅಡಳಿತಾಧಿಕಾರಿ ಸುಮಾ ಪಟೇಲ್ ತಿಳಿಸಿದರು. ದಾಖಲಾಗಿರುವ ಪ್ರಕರಣಗಳಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳೇ ಹೆಚ್ಚಾಗಿವೆ. ಪತಿ ಅಥವಾ ಅತ್ತೆ, ಮಾವನಿಂದ ದೈಹಿಕ ಹಾಗೂ ಮಾನಸಿಕ ಹಿಂಸೆಯಂಥ ಪ್ರಕರಣಗಳು ಹೆಚ್ಚಾಗಿವೆ. ಕೇಂದ್ರದಲ್ಲಿ ಕೌನ್ಸೆಲಿಂಗ್ ಮೂಲಕ ಸಂತ್ರಸ್ತೆಯರಿಗೆ ಪರಿಹಾರ ದೊರಕಿಸಿಕೊಡಲಾಗಿದೆ. ಕೆಲವು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಿದೆ. ಹಲವು ಪ್ರಕರಣಗಳು ಸುಖಾಂತ್ಯ ಕಂಡಿದ್ದು, ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದೆ ಎಂದು ಸಖಿ ಕೇಂದ್ರದ ಅಧಿಕಾರಿಗಳು ಹೇಳಿದರು.

ಸಿಬ್ಬಂದಿ ಕೊರತೆ: ಪ್ರಸ್ತುತ ಸಖಿ ಕೇಂದ್ರದಲ್ಲಿ 6 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತಾಧಿಕಾರಿ, ಒಬ್ಬ ಆಪ್ತ ಸಮಾಲೋಚಕರು, ವೈದ್ಯ ಹಾಗೂ ಸಮಾಜ ಸೇವಕರು, ಇಬ್ಬರು ಡಿ ಗ್ರೂಪ್ ನೌಕರರು ಇದ್ದಾರೆ. ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು, ಹೆಚ್ಚಿನ ಸಿಬ್ಬಂದಿ ನೇಮಕವಾದರೆ, ಇನ್ನೂ ಉತ್ತಮ ಸೇವೆ ಕೊಡಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.

ಹೆಣ್ಣುಮಕ್ಕಳ ಸಬಲೀಕರಣ, ಸ್ವಾವಲಂಬನೆ ಸೇರಿ ನೊಂದವರ ಪಾಲಿಗೆ ಸಖಿ ಕೇಂದ್ರ ಆಸರೆಯಾಗಿದೆ. ಜಿಲ್ಲೆಯಲ್ಲಿ ಹೊಸ ಕಟ್ಟಡದಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಸ್ಪಂದನೆ ದೊರೆಯುತ್ತಿದೆ. ರಾಜ್ಯಾದ್ಯಂತ ಸಖಿ ಕೇಂದ್ರಗಳು ಕಾರ್ಯಾರಂಭಿಸಿವೆ. ಸ್ವಂತ ಕಟ್ಟಡ ಹೊಂದಿರುವ ಕೇಂದ್ರಗಳ ಪೈಕಿ ಗ್ರಾಮಾಂತರ ಜಿಲ್ಲೆಯ ಕೇಂದ್ರವೂ ಸೇರಿದೆ. ಎಂಟಿಬಿ ನಾಗರಾಜ್, ಜಿಲ್ಲಾ ಉಸ್ತುವಾರಿ ಸಚಿವ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ನೆರವಿಗೆ ಸಖಿ ಕೇಂದ್ರ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಕಾನೂನು, ವೈದ್ಯಕೀಯ ನೆರವು ಸೇರಿ ಎಲ್ಲ ಬಗೆಯಲ್ಲೂ ಸಂತ್ರಸ್ತರಿಗೆ ಕೇಂದ್ರ ಆಸರೆಯಾಗಿದೆ, ಸಾಮಾನ್ಯವಾಗಿ ಬಡಕುಟುಂಬದ ಹೆಣ್ಣುಮಕ್ಕಳಿಂದಲೇ ಇಂಥ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆೆ. ಅವರೆಲ್ಲರಿಗೂ ಉಚಿತವಾಗಿ ಸೇವೆ ಒದಗಿಸಲಾಗುತ್ತಿದೆ. ಇಲ್ಲಿನ ಸೌಲಭ್ಯದ ಬಗ್ಗೆ ಸಂತ್ರಸ್ತೆಯರಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ. ಸುಮಾ ಪಟೇಲ್, ದೊಡ್ಡಬಳ್ಳಾಪುರ ಸಖಿ ಕೇಂದ್ರ ಘಟಕ ಆಡಳಿತಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net