ಸಂತ್ರಸ್ತರಿಗೆ ಸೇರಬೇಕಿದ್ದ ದಿನಸಿ ಹುಳುಗಳ ಪಾಲು

13 GDG 13C
Published on

ಗದಗ: ಹತ್ತು ತಿಂಗಳು ಕಳೆದರೂ ವಿತರಣೆ ಮಾಡದ್ದರಿಂದ ನೆರೆ ಸಂತ್ರಸ್ತರಿಗೆ ಸೇರಬೇಕಾದ ದಿನಸಿ ಕಿಟ್ ಹಾಳಾದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ರೋಣ ತಾಲೂಕಿನ ನವಗ್ರಾಮ ಮೆಣಸಗಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿನ ನವಗ್ರಾಮದ ಪಶು ಆಸ್ಪತ್ರೆ ಕೊಠಡಿಯಲ್ಲಿ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆಂದು ನೀಡಿದ 380 ದಿನಸಿ ಕಿಟ್​ಗಳಿದ್ದು, ವಿತರಿಸದ ಕಾರಣ ಕೊಳೆತು ನಾರುತ್ತಿವೆ.

ಕಳೆದ ವರ್ಷ ಮಲಪ್ರಭಾ, ಬೆಣ್ಣೆಹಳ್ಳದ ಭೀಕರ ಪ್ರವಾಹಕ್ಕೆ ಸಿಲುಕಿ ಹಲವಾರು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆದಿವೆ. ಪ್ರವಾಹದ ಹೊಡೆತಕ್ಕೆ ಮನೆ ಕಳೆದುಕೊಂಡ ಸಾವಿರಾರು ಜನರು ಸಂತ್ರಸ್ತರಾಗಿದ್ದರು. ಅವರಿಗೆ ನಾಡಿನ ಅನೇಕ ಜನರು ಸಹಾಯಹಸ್ತ ಚಾಚಿದ್ದರು. ಆದರೆ, ನೆರೆ ಸಂತ್ರಸ್ತರ ನೆರವಿಗಾಗಿ ಸರ್ಕಾರ ನೀಡಿದ್ದ ಆಹಾರ ಸಾಮಗ್ರಿ ಕಿಟ್​ಗಳನ್ನು ಅಧಿಕಾರಿಗಳು ವಿತರಿಸಿಲ್ಲ. ಹೀಗಾಗಿ ಆಹಾರ ಕಿಟ್​ಗಳು ಹುಳುಗಳ ಪಾಲಾಗಿವೆ.

ಜಿಲ್ಲೆಯ ನರಗುಂದ, ರೋಣ ತಾಲೂಕಿನ ವಾಸನ, ಕೊಣ್ಣೂರ, ಮೆಣಸಗಿ, ಹೊಳೆಆಲೂರು ಸೇರಿ 16 ಗ್ರಾಮಗಳಿಗೆ ಮಲಪ್ರಭೆ, ಬೆಣ್ಣೆ ಹಳ್ಳದ ಪ್ರವಾಹದ ನೀರು ನುಗ್ಗಿ ಗ್ರಾಮಗಳೆಲ್ಲ ಜಲಾವೃತವಾಗಿದ್ದವು. ಆ ಗ್ರಾಮಸ್ಥರ ಬದುಕನ್ನೇ ಜಲಾಸುರ ಕಿತ್ತುಕೊಂಡಿದ್ದ. ಅನ್ನ, ನೀರು ಸಿಗದೆ ಸಾವಿರಾರು ಜನರು ಪರದಾಡಿದರು. ವಸತಿ ವ್ಯವಸ್ಥೆ ಇಲ್ಲದೆ ನೂರಾರು ಕುಟುಂಬಗಳು ರಸ್ತೆ ಬದಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸಿರುವ ಉದಾಹರಣೆಗಳು ಇವೆ.

ಅಧಿಕಾರಿಗಳ ವಿರುದ್ಧ ಸಂತ್ರಸ್ತರ ಆಕ್ರೋಶ

ಬಡ ಜನರ ಹೊಟ್ಟೆ ಸೇರಬೇಕಿದ್ದ ಆಹಾರ ಧಾನ್ಯಗಳು ಹುಳುಗಳ ಪಾಲಾಗುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ನೆರೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಿಟ್​ನಲ್ಲಿ ಏನೇನಿದೆ?

ಸರ್ಕಾರ ನೀಡಿದ ಕಿಟ್​ನಲ್ಲಿ 10 ಕೆಜಿ ಅಕ್ಕಿ, 1 ಲೀಟರ್ ಅಡುಗೆ ಎಣ್ಣೆ, 1 ಕೆಜಿ ಉಪ್ಪು, ತೊಗರಿ ಬೇಳೆ, 5 ಲೀಟರ್ ಸೀಮೆ ಎಣ್ಣೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net