

ಶಿವಮೊಗ್ಗ: ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕ ನಷ್ಟ ಅನುಭವಿಸಿದ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ದೇಶದ ಆರ್ಥಿಕ ಪುನಶ್ಚೇತನಕ್ಕೆ ಪರ್ಯಾಯ ನೀತಿಗಳನ್ನು ಅನುಸರಿಸಬೇಕು ಹಾಗೂ ಕಾರ್ವಿುಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ನೇತೃತ್ವದಲ್ಲಿ ಕಾರ್ವಿುಕರು ಹಾಗೂ ಬಿಸಿಯೂಟ ನೌಕರರು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾರ್ವಿುಕ ಸಂಘದ ಕಡ್ಡಾಯ ಮಾನ್ಯತೆಯ ಶಾಸನ ರೂಪಿಸಬೇಕು. ಗುತ್ತಿಗೆ ಕಾರ್ವಿುಕರನ್ನು ಕಾಯಂಗೊಳಿಸಲು ಅಸ್ಸಾಂ ಹಾಗೂ ತಮಿಳುನಾಡು ಮಾದರಿ ಶಾಸನ ರೂಪಿಸಬೇಕು. ಅಸಂಘಟಿತ ಕಾರ್ವಿುಕರ ಭವಿಷ್ಯನಿಧಿಗೆ ಶಾಸನ ಜಾರಿಗೊಳಿಸಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರಿಗೆ ಕಾರ್ವಿುಕ ಇಲಾಖೆ ಸೌಲಭ್ಯಗಳನ್ನು ವಿಸ್ತರಿಸಬೇಕೆಂದು ಆಗ್ರಹಿಸಿದರು.
ಅಕ್ಷರ ದಾಸೋಹ ಕಾರ್ಯಕ್ರಮದ ಮೂಲಕ ಬಿಸಿಯೂಟ ನೌಕರರು ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಅನೇಕ ಹೋರಾಟಗಳನ್ನು ನಡೆಸಿದರೂ ವೇತನ ಹೆಚ್ಚಳವಾಗಿಲ್ಲ. ಮಾರ್ಚ್ನಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅನೇಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಎಸ್.ಬಿ.ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಎಂ.ನಾರಾಯಣ್, ಕಾರ್ಯದರ್ಶಿಗಳಾದ ಹನುಮಮ್ಮ, ಪಿ.ಚಂದ್ರಪ್ಪ, ಹನುಮಂತ, ಪ್ರಶಾಂತ್, ಉಪಾಧ್ಯಕ್ಷರಾದ ತುಳಸಿಪ್ರಭಾ, ಅಕ್ಕಮ್ಮ, ಖಜಾಂಚಿ ಕೆ.ಪ್ರಭಾಕರನ್ ಪ್ರತಿಭಟನೆಯಲ್ಲಿದ್ದರು.