

ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿ ಗುಲಸಿಂದ ದಾಖಲೆ ಗ್ರಾಮ ಜಿ.ರಂಗಾಪುರದಲ್ಲಿ ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ತರಿಗೆ ಕಾಯ್ದಿರಿಸಲಾಗಿದ್ದ ಭೂಮಿಯನ್ನು ವಿವಿಧ ಗ್ರಾಮದ ರೈತರು ಉಳುಮೆ ಮಾಡುತ್ತಿದ್ದು ಜಮೀನನ್ನು ಮಂಜೂರು ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಗುಲಸಿಂದ ಗ್ರಾಮದ ಸರ್ವೇ ನಂ.147 ರಲ್ಲಿ 112 ಎಕರೆ ಗೋಮಾಳ ಜಮೀನಿನ ಪೈಕಿ 78 ಎಕರೆ ಜಮೀನನ್ನು ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ತರಿಗೆ ಕಾಯ್ದಿರಿಸಲಾಗಿದ್ದು, ಈ ಜಮೀನಿನಲ್ಲಿ ಸುಮಾರು 52 ವರ್ಷಗಳಿಂದ ರೈತರು ವಾಸಕ್ಕೆ ಮನೆಗಳನ್ನು ನಿರ್ಮಿಸಿಕೊಂಡು ಜಮೀನನ್ನು ಉಳುಮೆ ಮಾಡುತ್ತಿರುವುದರಿಂದ ಜಮೀನನ್ನು ರೈತರಿಗೆ ಮಂಜೂರು ಮಾಡಿಕೊಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದು ನಮ್ಮ ಕೋರಿಕೆಯನ್ನು ಪರಿಶೀಲಿಸಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದು, ಇದು ಗ್ರಾಮ ಠಾಣಾ ಎಂದು ಘೋಷಣೆಯಾದರೆ ಹಲವಾರು ವರ್ಷಗಳಿಂದ ಭದ್ರತೆ ಇಲ್ಲದೆ ಮನೆ ನಿರ್ಮಿಸಿಕೊಂಡು ಜಮೀನನ್ನು ಉಳುಮೆ ಮಾಡುತ್ತಿರುವ ಅನುಭೋಗದಾರರಿಗೆ ಪ್ರಯೋಜನ ಸಿಗಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಮಾತನಾಡಿ, ಸದ್ಯ ಮೀಸಲಿರಿಸಿದ ಜಾಗದಲ್ಲಿ ಮನೆ, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೇಮಾವತಿ ನೀರಾವರಿ ನಿಗಮದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಸರ್ವೇ ಮಾಡಿಸಿ ವಾಸ್ತವಾಂಶದಲ್ಲಿ ಎಷ್ಟು ಜನರು ಮನೆ ನಿರ್ಮಿಸಿದ್ದಾರೆ, ಸಾಗುವಳಿ ಮಾಡಿದ್ದಾರೆ, ಹಕ್ಕುಪತ್ರ ಪಡೆದಿದ್ದಾರೆ, ಸಾಗುವಳಿ ಚೀಟಿ ಪಡೆದು ಖಾತೆ ಕೂತಿದೆ ಎಂಬ ವಿವರಗಳನ್ನೆಲ್ಲ ತಹಸೀಲ್ದಾರ್ ಮತ್ತು ಎಡಿಆರ್‌ಎಲ್‌ಆರ್ ಮೂಲಕ ಸರ್ಕಾರಕ್ಕೆ ಕಳಿಸಿಕೊಡಲಾಗುವುದು. ಕಂದಾಯ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಚರ್ಚಿಸಿ ನಂತರ ಸರ್ಕಾರ ತೀರ್ಮಾನ ಕೈಗೊಂಡು, ಗ್ರಾಮಠಾಣಾ ಎಂದು ಘೋಷಣೆಯಾಗಬೇಕಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಸಿ.ಜೆ.ಗೀತಾ, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಮಂಜುನಾಥ್, ಕಲಸಿಂದ ವೃತ್ತ ಗ್ರಾಮ ಆಡಳಿತಾಧಿಕಾರಿ ಚಲುವನಾರಾಯಣ್, ಪಿಡಿಒ ಶೋಭಾ, ಗ್ರಾಮದ ಪಂಚಾಯಿತಿ ಸದಸ್ಯರಾದ ಉಮೇಶ್, ಜಿ.ಆರ್. ಮಂಜುನಾಥ, ಉಮಾ ಮಂಜುನಾಥ ಹಾಗೂ ಗ್ರಾಮಸ್ಥರಾದ ಗೋವಿಂದೇಗೌಡ, ಯಲ್ಲಪ್ಪ, ಗಂಗಾಧರ್, ಗವಿ, ಭೈರೇಗೌಡ, ಚಂದ್ರೇಗೌಡ ಮತ್ತು ಊರಿನ ಮುಖ್ಯಸ್ಥರು ಜಿ.ರಂಗಾಪುರ ಗ್ರಾಮದ ಗ್ರಾಮಸ್ಥರು ಇದ್ದರು.