

ಚಿತ್ರದುರ್ಗ: ಕಳೆದೊಂದು ವಾರದಿಂದಲೂ ಸುರಿದ ಮಳೆಯಿಂದಾಗಿ ತಾಲೂಕಿನ ಓಬಣ್ಣನ ಹಳ್ಳಿಯ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜಲಾವೃತವಾಗಿವೆ. ಇದರಿಂದ ಸಂತ್ರಸ್ತರು ಪರದಾಡುವಂತಾಗಿದೆ. ವಿಷಯ ತಿಳಿದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜನರ ಸಮಸ್ಯೆ ಆಲಿಸಿ, ಭೋವಿ ಗುರುಪೀಠದಿಂದ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಸ್ಪಂದಿಸಿದರು.
ಗ್ರಾಮದ ಸುತ್ತಲೂ ಗುಡ್ಡಗಾಡು ಪ್ರದೇಶವಿದೆ. ತಗ್ಗಿರುವ ಕಾರಣ ಮಳೆಗೆ ಅನೇಕ ಮನೆಗಳು ಭಾಗಶಃ, ಕೆಲವು ಪೂರ್ಣ ಪ್ರಮಾಣದಲ್ಲೂ ಹಾನಿಯಾಗಿವೆ. ಮಳೆ ನೀರು ಹೊರಹಾಕಲು ಅನೇಕರು ಜಾಗರಣೆ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ಮಾಹಿತಿ ಇದೆ.
ನಂತರ ಮಾತನಾಡಿದ ಶ್ರೀಗಳು, ಮಳೆ ಅಬ್ಬರಿಸಿದರೂ ನೀವುಗಳು ಧೃತಿಗೆಟ್ಟಿಲ್ಲ. ನಿಮ್ಮಲ್ಲಿನ ಅಚಲ ಶಕ್ತಿಯೇ ಇದಕ್ಕೆ ಕಾರಣ. ಮನುಷ್ಯ ಎಂದೊಡನೆ ಸಮಸ್ಯೆಗಳು ಸಹಜ. ಅದನ್ನು ಧೈರ್ಯವಾಗಿ ಎದುರಿಸಲು ಮುಂದಾದಾಗ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಶ್ರಮಿಕ ವರ್ಗದವರಾದ ನೀವು ಕಾಯಕ ನಂಬಿ ಬದುಕುತ್ತಿದ್ದೀರಿ. ಸರ್ಕಾರ ನಿಮ್ಮ ನೆರವಿಗೆ ಬರುವುದು ಸ್ವಲ್ಪ ತಡವಾಗಬಹುದು. ಅಲ್ಲಿಯವರೆಗೂ ಕಾಯದೆ, ವಾಸಿಸಲು ಸದೃಢವಾಗಿ ಸೂರು ಕಟ್ಟಿಕೊಳ್ಳಿ. ಮುಂದಿನ ದಿನಗಳಲ್ಲಿ ಮನೆಗಳಿಗೆ ನೀರು ನುಗ್ಗದಂತೆ ಸುಭದ್ರವಾದ ತಡೆಗೋಡೆ ನಿರ್ಮಾಣದ ಅಗತ್ಯವಿದೆ ಎಂದು ಸಲಹೆ ನೀಡಿದರು.
ದುಡಿದು ಗಳಿಸಿದ ಹಣವನ್ನು ಪೂರ್ಣ ಖರ್ಚು ಮಾಡದೆ, ಉಳಿಸಲು ಮುಂದಾಗಿ. ಆಪತ್ತಿನ ಸಮಯದಲ್ಲಿ ಬಳಸಲು ಸಹಕಾರಿಯಾಗಲಿದೆ ಎಂದು ಕಿವಿಮಾತು ಹೇಳಿದರು.
ಭೋವಿ ಜಿಲ್ಲಾ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ ಮಾತನಾಡಿ, ಜನರಲ್ಲಿ ಒಗ್ಗಟ್ಟಿನ ಕೊರತೆ ಇದೆ. ಸಂಘಟನೆಗೆ ಮುಂದಾದರೆ, ಏನು ಬೇಕಾದರೂ ಸಾಧಿಸಬಹುದು. ಜನಧ್ವನಿ ವಿಧಾನಸೌಧ ನಡುಗಿಸುವಂತಿರಬೇಕು. ಆಗ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಸಲಹೆ ನೀಡಿದರು.
ಎಸ್‌ಜೆಎಸ್ ಸಂಸ್ಥೆ ಕಾರ್ಯದರ್ಶಿ ಡಿ.ಸಿ.ಮೋಹನ್ ಮಾತನಾಡಿ, ಮಠದ ಶಾಲೆಯಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ. ಬಡ ಕುಟುಂಬದ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸದೆ, ಶಾಲೆಗೆ ಸೇರಿಸಿ ವಿದ್ಯಾವಂತರನ್ನಾಗಿಸಿ ಎಂದರು.
120 ಮಂದಿಗೆ ಕಿಟ್ ವಿತರಣೆ: ಅಕ್ಕಿ, ಬೇಳೆ, ರಾಗಿ, ಜೋಳ, ಖಾರದ ಪುಡಿ, ಉಪ್ಪು, ಸಕ್ಕರೆ, ಗೋಧಿ ಸೇರಿ 20 ವಿಧದ ಆಹಾರ ಸಾಮಗ್ರಿಯುಳ್ಳ ಕಿಟ್‌ಗಳನ್ನು 120 ಸಂತ್ರಸ್ತರಿಗೆ ಹಂಚಲಾಯಿತು.
ಮಾಜಿ ಅಧ್ಯಕ್ಷ ತಿಮ್ಮಣ್ಣ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಗ್ರಾಪಂ ಅಧ್ಯಕ್ಷ ಟಿ.ಉಮೇಶ್, ಪಿಡಿಒ ಆಂಜನೇಯ, ಸದಸ್ಯರಾದ ಲಕ್ಷ್ಮಮ್ಮ, ಜಯಪ್ಪ, ಮುಖಂಡರಾದ ಚಂದ್ರಪ್ಪ, ಯಲ್ಲಪ್ಪ, ಓಬಳೇಶ್ ಇತರರಿದ್ದರು.