

ಜೇವರ್ಗಿ: ಭೀಮಾ ಪ್ರವಾಹದಿಂದ ಸಂಕಷ್ಟದಲ್ಲಿರುವ ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ರೈತರು, ಜನರಿಗೆ ಸರ್ಕಾರ ಪರಿಹಾರ ವಿತರಿಸುವ ಮೂಲಕ ಕತ್ತಲ ಬದುಕಿನಲ್ಲಿ ಬೆಳಕು ತರುವಂಥ ಕೆಲಸ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ನೆರೆಪೀಡಿತ ಕಟ್ಟಿಸಂಗಾವಿ ಗ್ರಾಮಕ್ಕೆ ಶಾಸಕ ಡಾ.ಅಜಯಸಿಂಗ್ ಇತರ ಜತೆ ಸೋಮವಾರ ಭೇಟಿ ನೀಡಿ ಹಾನಿಗೀಡಾದ ಮನೆ ಹಾಗೂ ಬೆಳೆ ಪರಿಶೀಲಿಸಿ ಸಂತ್ರಸ್ತರ ಗೋಳು ಆಲಿಸಿದ ಅವರು, ನೀವು ಧೃತಿಗೆಡುವ ಅಗತ್ಯವಿಲ್ಲ. ಸರ್ಕಾರದ ಕಿವಿ ಹಿಂಡಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಅಭಯ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜೇವರ್ಗಿ ಸೇರಿ ಮೂರೂ ಜಿಲ್ಲೆಯ ನೂರಾರು ಗ್ರಾಮಗಳು ಜಲಾವೃತಗೊಂಡು ಲಕ್ಷಾಂತರ ಹೆಕ್ಟೇರ್ ಬೆಳೆ ಹಾಳಾಗಿದೆ. ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಹೀಗಾಗಿ ತಕ್ಷಣ ಸಂತ್ರಸ್ತರಿಗೆ ಸರ್ಕಾರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಮುಳುಗಡೆಯಾದ ಕಟ್ಟಿಸಂಗಾವಿ ಗ್ರಾಮ ಸ್ಥಳಾಂತರಿಸಬೇಕು ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ವಸತಿ ಯೋಜನೆಗಳಡಿ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಶಾಸಕರಾದ ಎಂ.ವೈ. ಪಾಟೀಲ್, ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಿ.ಆರ್.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಪ್ರಮುಖರಾದ ಸಿದ್ಧಲಿಂಗರೆಡ್ಡಿ ಇಟಗಿ, ರುಕುಂ ಪಟೇಲ್ ಇಜೇರಿ, ವಿಜಯಕುಮಾರ ಪಾಟೀಲ್ ಕಲ್ಲಹಂಗರಗಾ, ರಾಜಶೇಖರ ಸೀರಿ, ಮಲ್ಲಿಕಾಜರ್ುನ ಹಲಕರ್ಟಿ , ನೀಲಕಂಠರಾವ ಮೂಲಗೆ, ಶಿವಣ್ಣಗೌಡ ಮಂದರವಾಡ, ಮಹಿಬೂಬ್ ಪಟೇಲ್ ಕೋಬಾಳ, ಶಿವಶರಣಪ್ಪ ಕೋಬಾಳ, ರುಕುಂ ಪಟೇಲ್ ಕೂಡಿ, ಅಬ್ದುಲ್ ಮಾಜಿದ್ ಸೇಠ ಗಿರಣಿ ಇತರರಿದ್ದರು.